ಲಕ್ನೋ: ಉತ್ತರಪ್ರದೇಶದ ಸುಲ್ತಾನಪುರದಲ್ಲಿರುವ ಚಪ್ಪಲಿ ಹೊಲಿಯುವ ಚಮ್ಮಾರನನ್ನು ಭೇಟಿ ಮಾಡಿದ ಮರುದಿನವೇ ಅವರಿಗೆ ಶೂ ಹೊಲಿಯುವ ಯಂತ್ರವೊಂದನ್ನು ಕಳುಹಿಸಿಕೊಟ್ಟು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾನವೀಯತೆ ಮೆರೆದಿದ್ದಾರೆ.ಶುಕ್ರವಾರವಷ್ಟೇ ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಲಕ್ನೋಗೆ ತೆರಳುವ ವೇಳೆ ಸುಲ್ತಾನ್ಪುರದ ಬೀದಿಬದಿಯಲ್ಲಿದ್ದ ಚಮ್ಮಾರ ರಾಮ್ ಚೈತ್ ಎಂಬವರ ಅಂಗಡಿಗೆ ಭೇಟಿ ನೀಡಿ ಕಷ್ಟಸುಖ ಆಲಿಸಿದ್ದರು. ಅಲ್ಲದೇ ತಾವೂ ಚಪ್ಪಲಿ ಸರಿಪಡಿಸುವ ವಿಧಾನವನ್ನು ಕಲಿತಕೊಂಡು ಚಪ್ಪಲಿ ಸರಿಪಡಿಸಲು ಪ್ರಯತ್ನಿಸಿದ್ದರು.
ಈ ವೇಳೆ ಚಮ್ಮಾರ ರಾಮ್ ಚೈತ್ ತಮ್ಮ ಕಷ್ಟಗಳನ್ನು ರಾಹುಲ್ ಗಾಂಧಿ ಬಳಿ ತೋಡಿಕೊಂಡು ತನಗೆ ನೆರವಾಗುವಂತೆ ಕೇಳಿಕೊಂಡಿದ್ದರು. ಇದಕ್ಕೆ ರಾಹುಲ್ ಗಾಂಧಿ ಅವರಿಗೆ ಸಹಾಯ ಮಾಡುವ ಭರವಸೆಯನ್ನು ನೀಡಿದ್ದರು. ಈ ಹಿನ್ನೆಲೆ ಶೂ ಹೊಲಿಯುವ ಯಂತ್ರವೊಂದನ್ನು ರಾಮ್ ಚೈತ್ ಅವರಿಗೆ ಕಳುಹಿಸಿಕೊಟ್ಟು ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.