ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಯಮಸ್ವರೂಪಿ ಕಸದ ಲಾರಿ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿಯಾಗಿದ್ದಾರೆ. ಮೃತರಿಬ್ಬರೂ ಟೆಕ್ಕಿಗಳಾಗಿದ್ದು, ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಗರದ ಹೃದಯ ಭಾಗದ ಕೆಆರ್ ಸರ್ಕಲ್ ಬಳಿ ಈ ದುರ್ಘಟನೆ ನಡೆದಿದೆ. ರಾತ್ರಿ 8.45ರ ಸುಮಾರಿಗೆ ಈ ಭೀಕರ ಅಪಘಾತ ನಡೆದಿದೆ. ಪ್ರಶಾಂತ್ (25), ಬಯನ್ನಗಾರಿ ಶಿಲ್ಪ (27) ಮೃತ ದುರ್ದೈವಿಗಳು. ಪ್ರಶಾಂತ್ ಮೂಲತಃ ಬೆಂಗಳೂರಿನ ಬಾಣಸವಾಡಿಯ ಯುವಕ. ಶಿಲ್ಪ ಆಂಧ್ರ ಮೂಲದವಳು. ಪ್ರಶಾಂತ್ ಮತ್ತು ಯುವತಿ ಇಬ್ಬರು ಸಹೋದ್ಯೋಗಿಗಳಾಗಿದ್ದು, ಐಟಿಪಿಎಲ್ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪಿಜಿಯಲ್ಲಿ ವಾಸ ಮಾಡುತ್ತಿದ್ದ ಯುವತಿ ಶಿಲ್ಪ, ಊಟಕ್ಕೆ ಎಂದು ಹೊರಗೆ ಬಂದಾಗ ಅಪಘಾತವಾಗಿದೆ.
ಮೆಜೆಸ್ಟಿಕ್‌ದ ಕೆಆರ್ ಸರ್ಕಲ್ ಮಾರ್ಗವಾಗಿ ಇವರಿಬ್ಬರೂ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಸಿಐಡಿ ಸಿಗ್ನಲ್ ಮಾರ್ಗದಿಂದ ಕೆಆರ್ ಸರ್ಕಲ್ ಕಡೆ ಕಸದ ಲಾರಿ ತೀವ್ರ ವೇಗದಿಂದ ಬಂದಿದೆ. ತಿರುವು ಇದ್ದ ಮಾರ್ಗದಲ್ಲಿ ಲಾರಿ ವೇಗವಾಗಿ ಬಂದ ಕಾರಣ ಕಸದ ಲಾರಿಯ ವೇಗದಿಂದ ತಪ್ಪಿಸಿಕೊಳ್ಳಲಾಗದೇ ಬೈಕ್ ಲಾರಿ ಕೆಳಗೆ ಸಿಲುಕಿಕೊಂಡಿದೆ.
ಮೃತರ ಮೇಲೆ ಹರಿದ ಕಸದ ಲಾರಿ ಸುಮಾರು 10 ಮೀಟರ್‌ನಷ್ಟು ದೂರ ದೇಹಗಳನ್ನು ಎಳೆದೊಯ್ದಿದೆ. ರಸ್ತೆ ಮೇಲೆ ರಕ್ತ ಚೆಲ್ಲಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಅಪಘಾತದ ಬಳಿಕ ಕಸದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕೂಡಲೇ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗದಲ್ಲಿಯೇ ಇಬ್ಬರೂ ಮೃತ ಪಟ್ಟರು. ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಒಯ್ಯಲಾಗಿದೆ.
ಸ್ಥಳಕ್ಕೆ ಹಲಸೂರು ಗೇಟ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮಗನನ್ನು ಕಳೆದುಕೊಂಡು ತಂದೆ ತಾಯಿ ಕಣ್ಣೀರು ಹಾಕಿದ್ದು, ಆಸ್ಪತ್ರೆಯಲ್ಲಿ ಪ್ರಶಾಂತ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. “ಬಿಬಿಎಂಪಿ ವಾಹನ ಅಪಘಾತ ಆಗಿದೆ. ನನ್ನ ಮಗ ಹಾಗೂ ಯುವತಿ ಸಾವನ್ನಪ್ಪಿದ್ದಾರೆ. ಮೊದಲು ಪೊಲೀಸರು ಸರಿಯಾಗಿ ರೆಸ್ಪಾನ್ಸ್ ಕೂಡ ಮಾಡಿಲ್ಲ. ನಮಗೆ ನ್ಯಾಯ ಬೇಕಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.