ಕೇರಳ:- ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಘೋರ ಗುಡ್ಡ ಕುಸಿತದಲ್ಲಿ ಹಲವರು ಮೃತಪಟ್ಟಿದ್ದು, ಅನೇಕರು ನಾಪತ್ತೆಯಾಗಿದ್ದಾರೆ. ಎನ್ಡಿಆರ್ಎಫ್, ಸ್ಥಳೀಯ ಪೊಲೀಸರು ಮತ್ತು ಸೈನ್ಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ನಡುವೆ ಕರ್ನಾಟಕ- ಕೇರಳ ರಸ್ತೆ ಸಂಪರ್ಕ ಕಡಿತ ಮಾಡಲಾಗಿದ್ದು, ಬಸ್ ಸಂಚಾರವೂ ಸ್ಥಗಿತವಾಗಿದೆ.
ರಕ್ಷಣಾ ಕಾರ್ಯಾಚರಣೆ ತಂಡಗಳು ಭೂಕುಸಿತದಿಂದ ತತ್ತರಿಸಿರುವ ವೈನಾಡಿಗೆ ಶೀಘ್ರವೇ ತಲುಪಲು ಅನುವಾಗುವಂತೆ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಬಂಡಿಪುರ ಚೆಕ್ಪೋಸ್ಟ್ನಲ್ಲಿ ಎನ್ಡಿಆರ್ಎಫ್ ಹಾಗೂ ಸೇನೆಯ ತಂಡಗಳಿಗೆ ಹಾಗೂ ಪರಿಹಾರ ಸಾಮಗ್ರಿಗಳ ಸಾಗಾಣಿಕೆ ವಾಹನಗಳಿಗೆ ಗ್ರೀನ್ ಕಾರಿಡಾರ್ ಮೂಲಕ ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಬಹುತೇಕ ಬಸ್ಸುಗಳು ಸಂಚಾರ ರದ್ದುಪಡಿಸಿವೆ.
ಗುಂಡ್ಲುಪೇಟೆ ಮಾರ್ಗವಾಗಿ ಸಾಗುವ ಬೆಂಗಳೂರು-ವೈನಾಡ್ ರಾಷ್ಟ್ರೀಯ ಹೆದ್ದಾರಿ 766 ರ ಮಾರ್ಗದಲ್ಲಿ ಸಂಚಾರ ಮುಂಜಾಗ್ರತಾ ಕ್ರಮವಾಗಿ ನಿರ್ಬಂಧಿಸಲಾಗಿದ್ದು, ಪರ್ಯಾಯವಾಗಿ ಗುಂಡ್ಲುಪೇಟೆ-ಬಂಡೀಪುರ-ಗುಡಲೂರ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ
ಇನ್ನೂ ಬೆಂಗಳೂರಿನಿಂದ ಕೇರಳಕ್ಕೆ ಸಂಚಾರ ಮಾಡುವ ಬಹುತೇಕ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದೆ. ಕರ್ನಾಟಕ ಸಾರಿಗೆ, ಕೇರಳ ಸಾರಿಗೆ ಇಲಾಖೆಗೆ ಸೇರಿದ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಕಣ್ಣೂರು, ನಿಲಾಂಬೂರು, ಕೋಝಿಕ್ಕೋಡ್, ವಡಗಾರ, ತಲಚೇರಿ ಸೇರಿದಂತೆ ಕೆಲ ಭಾಗಗಳಿಗೆ ಮಾತ್ರ ಬೇರೆ ಬೇರೆ ಮಾರ್ಗಗಳ ಮೂಲಕ ಸಂಚಾರ ನಡೆಯುತ್ತಿದೆ
ಕೇರಳದಿಂದಲೂ ಇಂದು ಬೆಂಗಳೂರಿಗೆ ಬಸ್ಗಳು ಬಂದಿಲ್ಲ. ಬೆಂಗಳೂರಿನಿಂದ ಕೇರಳಕ್ಕೆ ನಿತ್ಯ ಕೇರಳ ಸಾರಿಗೆ ಇಲಾಖೆಯ 15ಕ್ಕೂ ಹೆಚ್ಚು ಬಸ್ಗಳ ಸಂಚಾರ ಆಗುತ್ತಿತ್ತು. ಇಂದು ಕೇವಲ ಮೂರು ಬಸ್ಗಳು ಮಾತ್ರ ಸಂಚರಿಸಿವೆ. ಪ್ರತಿ ನಿತ್ಯ ರಾತ್ರಿ 8 ಗಂಟೆ ಬಳಿಕ ರಾಜ್ಯ ಸಾರಿಗೆಯಿಂದ 10ಕ್ಕೂ ಹೆಚ್ಚು ಬಸ್ಗಳ ಸಂಚಾರ ಇರುತ್ತಿದ್ದು, ಇಂದು ಒಂದು ಬಸ್ ಮಾತ್ರ ಕೇರಳಕ್ಕೆ ಪ್ರಯಾಣ ಬೆಳೆಸಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ರಾಜ್ಯಗಳ ಬಸ್ ಸಂಚಾರ ಸ್ಥಗಿತಗೊಂಡಿದೆ.