ಬೆಂಗಳೂರು: ಪರಿಚಿತ ಯುವತಿ ಮೇಲೆ ಜಾತಕದ ದೋಷ ನಿವಾರಿಸುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಹಾಸನ ಜಿಲ್ಲೆಯ ಪ್ರಸಿದ್ಧ ದೇವಾಲಯದ ಪೂಜಾರಿಯೊಬ್ಬನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನದ ಪುರದಮ್ಮ ದೇವಾಲಯದ ಪೂಜಾರಿ ದಯಾನಂದ್ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಬಾಗಲಗುಂಟೆ ಸಮೀಪದ ನೆಲೆಸಿರುವ ಸಂತ್ರಸ್ತೆಯನ್ನು ಲೈಂಗಿಕವಾಗಿ ಪೂಜಾರಿ ಶೋಷಿಸಿದ್ದ.
ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನದ ಪುರದಮ್ಮ ದೇವಾಲಯವು ಶಕ್ತಿ ದೇವತೆಯಾಗಿ ಜನ ಮಾಸದಲ್ಲಿ ನೆಲೆಸಿದೆ. ಹಲವು ವರ್ಷಗಳಿಂದ ಈ ದೇವಾಲಯದಲ್ಲಿ ದಯಾನಂದ್ ಪೂಜಾರಿಯಾಗಿದ್ದು,
ದೇವರ ಹೆಸರು ಬಳಸಿಕೊಂಡು ಮಾಟ ಮಂತ್ರ ಹಾಗೂ ವಶೀಕರಣ ಹೀಗೆ ಅನಾಚಾರ ಆಚರಣೆಗಳಲ್ಲಿ ಆತ ನಿರತನಾಗಿದ್ದ ಎಂಬ ಆರೋಪಗಳು ಕೇಳಿಬಂದಿವೆ. ದೇವಾಲಯದ ಹೆಸರಿನಲ್ಲಿ ಸಂಪಾದಿಸಿದ ಹಣದಲ್ಲಿ ದಯಾನಂದ್ ವೈಭೋಗದ ಜೀವನ ಸಾಗಿಸುತ್ತಿದ್ದ. ಮೈ ತುಂಬ ಚಿನ್ನಾಭರಣ ಧರಿಸಿ ಐಷರಾಮಿ ಕಾರುಗಳಲ್ಲೇ ಓಡಾಡುತ್ತಿದ್ದ ಆತ, ತನ್ನ ಶ್ರೀಮಂತ ಜೀವನ ಶೈಲಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಲಗಳಲ್ಲಿ ಹಂಚಿಕೊಳ್ಳುತ್ತಿದ್ದ. ಆತನಿಗೆ ಶೋಕಿ ಖಯಾಲಿ ವಿಪರೀತ ಇತ್ತು ಎಂದು ಪೊಲೀಸರು ಹೇಳಿದ್ದಾರೆ.