ಆನ್‌ಫೀಲ್ಡ್‌ನಲ್ಲೇ ಹಾವು-ಮುಂಗುಸಿಯಂತೆ ಕಿತ್ತಾಡಿದ್ದ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್, ಇದೀಗ ಟೀಮ್ ಇಂಡಿಯಾದಲ್ಲಿ ಒಟ್ಟಿಗೆ ಕೆಲಸ ಮಾಡುವಂತ್ತಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ಒಮ್ಮೆಯಲ್ಲ ಹಲವು ಬಾರಿ ಕೊಹ್ಲಿ ಮತ್ತು ಗಂಭೀರ್ ನಡುವೆ ದೊಡ್ಡ ಜಗಳಗಳೇ ನಡೆದಿವೆ. ಈಗ ಎಲ್ಲಾ ವೈರತ್ವ ಮರೆತು ಟೀಮ್ ಇಂಡಿಯಾಗೆ ಟ್ರೋಫಿಗಳನ್ನು ಗೆದ್ದುಕೊಡುವ ಕಡೆಗೆ ಈ ಇಬ್ಬರು ಕೆಲಸ ಮಾಡಬೇಕಿದೆ.
ಇನ್ನೂ ಭಾರತ ಮತ್ತು ಶ್ರೀಲಂಕಾ ನಡುವಣ ಏಕದಿನ ಸರಣಿ ನಾಳೆಯಿಂದ ಶುರುವಾಗಲಿದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾ ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅದು ಕೂಡ ನೂತನ ಕೋಚ್ ಗೌತಮ್ ಗಂಭೀರ್ ಅವರ ಸಾರಥ್ಯದಲ್ಲಿ ಎಂಬುದು ವಿಶೇಷ.
ಈ ಅಭ್ಯಾಸ ನಡುವೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ದೀರ್ಘ ಚಿಟ್ ಚಾಟ್ನಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಕೊಹ್ಲಿ ಹೇಳುತ್ತಿದ್ದ ಜೋಕ್ಗಳಿಗೆ ಟೀಮ್ ಇಂಡಿಯಾ ಕೋಚ್ ಮೈಮರೆತು ನಕ್ಕಿದ್ದು ವಿಶೇಷವಾಗಿತ್ತು. ಗೌತಮ್ ಗಂಭೀರ್ ನಗುವುದೇ ಅಪರೂಪ.
ಸದಾ ಗಂಭೀರವಾಗಿರುವ ಗಂಭೀರ್ ಅವರನ್ನು ವಿರಾಟ್ ಕೊಹ್ಲಿ ನಗೆಗಡಲಲ್ಲಿ ತೇಲಿಸಿದ್ದರು. ಇದೀಗ ಕಿಂಗ್ ಕೊಹ್ಲಿ-ಜಿಜಿ ನಡುವಣ ಹಾಸ್ಯಮಯ ಸನ್ನಿವೇಶದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರ ನಡುವಣ ಹೊಂದಾಣಿಕೆಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ
ಇನ್ನು ಈ ಸರಣಿಯ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದ ಬಳಿಕ ರಾಹುಲ್ ಇದೀಗ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಲಂಕಾ ವಿರುದ್ಧದ ಸರಣಿಗೂ ಮುನ್ನ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡು ಬಂದಿದೆ.
ಭಾರತ ಮತ್ತು ಶ್ರೀಲಂಕಾ ನಡುವಣ ಏಕದಿನ ಸರಣಿಯು ಆಗಸ್ಟ್ 2 ರಿಂದ ಶುರುವಾಗಲಿದೆ. ಇನ್ನು 2ನೇ ಪಂದ್ಯವು ಆಗಸ್ಟ್ 4 ರಂದು ನಡೆಯಲಿದ್ದು, ಮೂರನೇ ಪಂದ್ಯ ಆಗಸ್ಟ್ 7 ರಂದು ಜರುಗಲಿದೆ. ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2.30 ರಿಂದ ಶುರುವಾಗಲಿದೆ.