ವಯನಾಡು: ನೆಲಸಮವಾದ ಕಟ್ಟಡಗಳು, ಕೆಸರು ತುಂಬಿದ ಹೊಂಡಗಳು, ಬೃಹತ್ ಬಂಡೆ ಕಲ್ಲುಗಳಿಂದ ಕೂಡಿದ ಬಿರುಕು ಬಿಟ್ಟ ನೆಲ ಇದು ಸದ್ಯ ವಯನಾಡಿನ ಮುಂಡಕೈ ಹಾಗೂ ಚೂರಲ್ಮಲಾದಲ್ಲಿ ಕಂಡುಬರ್ತಿರುವ ಸನ್ನಿವೇಶಗಳು.. ದುರಂತದಲ್ಲಿ ಸಾವಿನ ಸಂಖ್ಯೆ 282 ದಾಟಿದ್ದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. 132 ಸೇನಾ ಸಿಬ್ಬಂದಿ ಸೇರಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ನಿಂದ ಕಾರ್ಯಾಚರಣೆ ಮುಂದುವರಿದಿದೆ.ಜಲಸಮಾಧಿಯಾದವರ ಮನ ಕಲುಕುವ ಕಥೆಗಳನ್ನು ಕೇಳಿದರೆ ಎಂಥವರ ಕಣ್ಣನ್ನು ಒದ್ದೆ ಮಾಡುತ್ತಿವೆ. ಪ್ರಕೃತಿ ಮಾತೆಯ ಅರ್ಧ ಸೆಕೆಂಡ್ ಮುನಿಸಿಗೆ ನೂರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ.
ಮಲ್ಪಾಡಿಯಲ್ಲಿ ಇರುವ ಸರ್ಕಾರಿ ಆಸ್ಪತ್ರೆಯ ಶವಾಗಾರವನ್ನು ತಾತ್ಕಾಲಿಕವಾಗಿ ಸಭಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ. ಏಕೆಂದರೆ ನೂರು ನೂರು ಹೆಣದ ರಾಶಿಗೆ ಜಾಗ ಬೇಕಲ್ವಾ? ತಮ್ಮವರ ಹೆಣ ಕಂಡ ಕೂಡಲೇ ಕೆಲವರು ಮುಗಿಲು ಮುಟ್ಟುವ ರೀತಿ ಅಳುತ್ತಾರೆ. ಅಂಬುಲೆನ್ಸ್‌ನಲ್ಲಿ ಬಂದ ಹೆಣ ತಮ್ಮವರದಲ್ಲ ಎಂದಾಗ ಅಯ್ಯೋ ನಮ್ಮವರ ಹೆಣ ಸಿಗುತ್ತೋ ಇಲ್ವೋ ಅಂತಾ ಒದ್ದಾಡುತ್ತಾರೆ. ಆದರೆ ಈ ಎರಡು ಸ್ಥಿತಿ ಇರದ ಒಂದಷ್ಟು ದೇಹಗಳು ಶವಾಗಾರ ಸೇರಿವೆ.
ದೇಹವೇ ಇರದ ಆರು ಬರೀ ಕೈಗಳು ಇದುವರೆಗೆ ಸಿಕ್ಕಿದೆ. ಇದು ಯಾರ ಯಾರ ಕೈ? ಪತ್ತೆ ಮಾಡುವುದು ಹೇಗೆ? ಇನ್ನೂ ಮೂರು ತಲೆ ಸಿಕ್ಕಿವೆ. ಆದರೆ ಮುಖದ ಗುರುತೇ ಸಿಗದ ಮಟ್ಟಕ್ಕೆ ಮುಖ ಜಜ್ಜಿವೆ. ಇವು ಯಾರ ತಲೆ ಅಂತಾ ಯಾರಿಗೆ ಗೊತ್ತಾಗುತ್ತೆ? ಹೀಗೆ ಎಂಟು ಪ್ರತ್ಯೇಕವಾದ ಕಾಲು ಸಿಕ್ಕಿವೆ. ಐದು ತಲೆ ಇರದ ಅರ್ಧ ದೇಹ ಸಿಕ್ಕಿವೆ. ಎಲ್ಲವನ್ನೂ ತಂದು ಎನ್‌ಡಿಆರ್‌ಎಫ್‌ನವರು ಶವಗಾರ ಸೇರಿಸಿದ್ದಾರೆ. ಇದನ್ನು ನೋಡುತ್ತಿದ್ದರೆ ವಿಧಿ ಎಂಥಾ ಕ್ರೂರಿ ಅನ್ನಿಸುತ್ತೆ.ಒಟ್ಟಿನಲ್ಲಿ ದುರಂತದ ಬಳಿಕ ಮುಂಡಕೈ ಹಾಗೂ ಚೂರಲ್ಮಲಾ ವಯನಾಡಿನ ನಕ್ಷೆಯಿಂದ ಮರೆಯಾಗಿವೆ. ಅಲ್ಲಿ ಈಗ ಏನೂ ಉಳಿದಿಲ್ಲ. ಮಣ್ಣು ಹಾಗೂ ಬಂಡೆಗಳ ಹೊರತು ಬೇರೇನೂ ಇಲ್ಲ. ಎಲ್ಲವೂ ಕೆಸರುಮಯವಾಗಿದ್ದು ಮರೆಯಲಾಗದ ದುರಂತವಾಗಿ ಇತಿಹಾಸದ ಪುಟ ಸೇರಿದೆ.