ನಮ್ಮ ಜೊತೆ ಸಹಕರಿಸು, ನೈಟ್ ಔಟ್ ಬಾ: ಅಶ್ಲೀಲ ಮೆಸೇಜ್ ಗೆ ಬೇಸತ್ತು ಗೃಹಿಣಿ ಸೂಸೈಡ್!
ಬೆಂಗಳೂರು ಗ್ರಾಮಾಂತರ:- ಆಕೆ ಗೃಹಿಣಿ ಆಗಿದ್ದರೂ ಶಾಲೆಗೆ ಹೋಗಬೇಕು, ಏನಾದರೂ ಸಾಧಿಸಬೇಕು ಅಂತ, ಗಂಡನ ಅನುಮತಿ ಮೇರೆಗೆ ಶಾಲೆಗೆ ಸೇರಿದ್ದಳು. ಆದರೆ ಆಕೆಗೆ ಶಾಲೆಯೇ ಮುಳುವಾಗಿ ಬಿಡ್ತೇನೋ. ಯಾಕಂದರೆ ಸಹಪಾಠಿಗಳ ವರ್ತನೆಗೆ ಜೀವವನ್ನೇ ಕಳೆದುಕೊಳ್ಳೋ ಸ್ಥಿತಿ ಬಂತು. ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ.
ಹೌದು, ರಾಜಧಾನಿ ಬೆಂಗಳೂರಿನ ಸಿಡೇದಹಳ್ಳಿಯಲ್ಲಿ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
31 ವರ್ಷದ ಮಮತಾ ನೇಣಿಗೆ ಶರಣಾದ ರ್ದುದೈವಿ. ಶಾಲಾ ಸಹಪಾಠಿಗಳಾದ ವಡ್ಡರಹಳ್ಳಿಯ ನಿವಾಸಿ ಅಶೋಕ್ ಹಾಗೂ ಜೆ.ಪಿ.ನಗರದ ಗಣೇಶ್ ಎಂಬುವವರು ಅಶ್ಲೀಲ ಸಂದೇಶ ಕಳಿಸಿ ನಮ್ಮ ಜೊತೆ ಸಹಕರಿಸು ಎಂದು ಕಿರುಕುಳ ನೀಡಿದ್ದಾರಂತೆ. ಜೊತೆಗೆ ನೈಟ್ ಔಟ್ ಬರುವಂತೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದೆ.
ನಿನ್ನ ಬಿಡುವುದಿಲ್ಲ, ನಿನ್ನ ಸಂಸಾರ ಹಾಳು ಮಾಡುತ್ತೇವೆಂದು ಬೆದರಿಕೆ ಒಡ್ಡಿದ್ದರಂತೆ. ಇದರಿಂದ ಮನನೊಂದು ಗೃಹಿಣಿ ಮಮತಾ ತನ್ನ ನಿವಾಸದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಲೋಕೇಶ್, ಪತ್ನಿ ಮಮತಾಗೆ ಫೋನ್ ಮಾಡಿದಾಗ ರಿಸೀವ್ ಮಾಡದ ಹಿನ್ನೆಲೆ ಮನೆ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅಶೋಕ್ ಮತ್ತು ಗಣೇಶ್ ವಿರುದ್ಧ ಲೋಕೇಶ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.