ಬೆಂಗಳೂರು:- ಅದು ಬರೋಬ್ಬರಿ 16 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬಜಾರ್. ಈ ತಿಂಗಳೋ, ಅಥವಾ ಮುಂದಿನ ತಿಂಗಳೋ ಉದ್ಘಾಟನೆ ಆಗ್ಬೇಕಾಗಿತ್ತು. ಆದರೆ ಇದೀಗ ಅದು ಸೋರಲು ಆರಂಭಿಸಿದೆ. ಹೌದು, ನಾವು ಹೇಳುತ್ತಿರೋದು ವಿಜಯನಗರ ಪಾಲಿಕೆ ಬಜಾರ್ ಬಗ್ಗೆ. ಎಸ್, ಬರೋಬ್ಬರಿ 16 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಿಜಯನಗರ ಪಾಲಿಕೆ ಬಜಾರ್ ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ.
ಸುಮಾರು ಏಳು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ ಇನ್ನೂ ಪೂರ್ಣವಾಗಿಲ್ಲ. ಈ ತಿಂಗಳೋ, ಮುಂದಿನ ತಿಂಗಳು ಓಪನ್ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಅಂಡರ್ ಗ್ರೌಂಡ್ ಮಾರ್ಕೆಟ್ನಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಆರಂಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಂತ ನಿರ್ಮಾಣ ಮಾಡಿದ್ದರೂ ಈಗ ನೋಡಿದರೆ ಟೆಂಡರ್ ಮೂಲಕ ಮಳಿಗೆಗಳನ್ನು ಪಡೆದುಕೊಳ್ಳಬೇಕು ಎನ್ನಲಾಗುತ್ತಿದೆ.
ಮೊದಲಿಗೆ 10 ಕೋಟಿ ರೂಪಾಯಿ ವೆಚ್ಚ ಅಂದಾಜಿಸಿ ಕಾಮಗಾರಿ ಆರಂಭ ಮಾಡಿದ್ದರು. ಈಗ ನೋಡಿದರೆ 16 ಕೋಟಿ ರೂಪಾಯಿ ವೆಚ್ಚವಾಗಿದೆ ಎನ್ನುತ್ತಿದ್ದಾರೆ. ಈ ಪಾಲಿಕೆ ಬಜಾರ್ಗೆ ಬರುವ ಗ್ರಾಹಕರಿಗೆ ವಾಹನಗಳನ್ನು ಪಾರ್ಕಿಂಗ್ ಮಾಡಲು ಯಾವುದೇ ವ್ಯವಸ್ಥೆ ಇಲ್ಲ. ಉದ್ಘಾಟನೆಗೂ ಮುನ್ನವೇ ಮಳಿಗೆಗಳಲ್ಲಿ ನೀರು ಸೋರುತ್ತಿದೆ.
ಉದ್ಘಾಟನೆಗೆ ಮುನ್ನವೇ ಮಳೆ ನೀರು ಸೋರುತ್ತಿದೆ ಅಂದರೆ ಎಷ್ಟರಮಟ್ಟಿಗೆ ಕಳಪೆ ಕಾಮಗಾರಿ ಮಾಡಿರಬೇಡಿ ಹೇಳಿ’ ಎಂದು ಸ್ಥಳೀಯ ನಿವಾಸಿ ರಾಜು ಎಂಬವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.