ಬಾಂಗ್ಲಾದೇಶದ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿತ್ತು. ಇಂದು ಸುಮಾರು 10 ಲಕ್ಷ ವಿದ್ಯಾರ್ಥಿಗಳು ಢಾಕಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದರ ಬೆನ್ನಲ್ಲೇ ಪ್ರತಿಭಟನಕಾರರು ಮನೆಗೆ ನುಗ್ಗುವ ಮೊದಲೇ ಶೇಖ್ ಹಸೀನಾ ರಾಜೀನಾಮೆ ನೀಡಿ ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಕೆಲ ಮಾಧ್ಯಮಗಳು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ ಎಂದು ವರದಿಯಾಗಿದೆ.
ಕೆಲವೇ ದಿನಗಳ ಹಿಂದೆ, 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತವನ್ನು ಮೀಸಲಿಡುವ ವಿವಾದಾತ್ಮಕ ಕೋಟಾ ವ್ಯವಸ್ಥೆಯನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಆರಂಭವಾಗಿತ್ತು.
ವಿದ್ಯಾರ್ಥಿಗಳ ಬ್ಯಾನರ್ ಅಡಿಯಲ್ಲಿ ಅಸಹಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಆಡಳಿತಾರೂಢ ಅವಾಮಿ ಲೀಗ್, ಛತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರ ಬೆಂಬಲಿಗರಿಂದ ವಿರೋಧವನ್ನು ಎದುರಿಸಿದಾಗ ಘರ್ಷಣೆಗಳು ಭುಗಿಲೆದ್ದವು. ಈ ಹಿನ್ನಲೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆಯನ್ನು ನೀಡಿ, ಢಾಕಾವನ್ನು ತೊರೆದು, ಅಜ್ಞಾತ ಸ್ಥಳಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ.