ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಬೆಂಗಳೂರು ಕಮಿಷನರ್ ದಯಾನಂದ್ ಅವರು ಸ್ಪೋಟಕ ಮಾಹಿತಿ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದೆ. ಮೌಖಿಕ, ಸಾಂಧರ್ಭಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಮತ್ತು ಅಲ್ಲಿಂದ ಸುಮಾರು ಶೇಕಡ 70 ರಷ್ಟು ವರದಿಗಳು ತಮ್ಮ ಕೈ ಸೇರಿವೆ ಎಂದು ಹೇಳಿದರು.
ಗ್ಯಾಜೆಟ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷ್ಯಗಳನ್ನು ಹೈದರಾಬಾದ್ ಎಫ್ಎಸ್ಎಲ್ ಗೆ ಕಳಿಸಲಾಗಿದ್ದು ಅಲ್ಲಿಂದ ವರದಿಗಳು ಕೆಲ ದಿನಗಳಲ್ಲಿ ತಮ್ಮನ್ನು ತಲುಪಲಿವೆ. ಎಲ್ಲ ವರದಿಗಳು ಪ್ರಾಪ್ತವಾದ ಬಳಿಕ ಮತ್ತೊಮ್ಮೆ ಸಾಕ್ಷಿಗಳಿಂದ ಸ್ಪಷ್ಟೀಕರಣ ಪಡೆಯಲಾಗುವುದು, ಅದಾದ ನಂತರ ಪ್ರಕರಣದ ಅಂತಿಮ ವರದಿ ಅಥವಾ ಚಾರ್ಜ್ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಆಯುಕ್ತ ದಯಾನಂದ ಹೇಳಿದರು.
ಇನ್ನೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ಸರಿಯಾದ ಸಾಕ್ಷಿಗಳನ್ನು ಸಂಗ್ರಹಿಸುತ್ತಿರುವ ಕಾರಣ ಚಾರ್ಜ್‌ಶೀಟ್ ಸಲ್ಲಿಸಲು ತಡವಾಗುತ್ತಿದೆ ಎನ್ನಲಾಗುತ್ತಿದೆ. 90 ದಿನಗಳ ಒಳಗಾಗಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಬೇಕಿದ್ದು ಸೆಪ್ಟಂಬರ್ 2ನೇ ವಾರದಲ್ಲಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.