ಮಂಗಳೂರು:- ಸಾಲ ತೀರಿಸಲು ನಕಲಿ ಕರೆನ್ಸಿ ನೋಟು ಮುದ್ರಣ ಮಾಡುತ್ತಿದ್ದ ನಾಲ್ವರು ಕಿಡಿಗೇಡಿಗಳನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 38 ವರ್ಷದ ಪ್ರಿಯೇಶ್ , 33 ವರ್ಷದ ವಿನೋದ್ ಕುಮಾರ್ ಕೆ, 58 ವರ್ಷದ ಅಬ್ದುಲ್ ಖಾದರ್ ಎಸ್ಎಂ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ 51 ವರ್ಷದ ಅಯೂಬ್ ಖಾನ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 500 ರೂಪಾಯಿ ಮುಖಬೆಲೆಯ 2,13,500 ರೂಪಾಯಿ ಜಪ್ತಿ ಮಾಡಲಾಗಿದೆ. ಕಾಸರಗೋಡಿನ ಚೆರ್ಕಳದಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿರುವ ಪ್ರಮುಖ ಆರೋಪಿ ಪ್ರಿಯೇಶ್ ಸಾಲದ ಸುಳಿಯಲ್ಲಿ ಸಿಲುಕಿದ್ದು, ಸಾಲ ಮರುಪಾವತಿಸಲು ನಕಲಿ ನೋಟು ಮುದ್ರಣಕ್ಕೆ ಮುಂದಾಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ. ಅವರು ಕೋಝಿಕ್ಕೋಡ್ ಮತ್ತು ದೆಹಲಿಯಿಂದ ಆನ್‌ಲೈನ್‌ನಲ್ಲಿ ಕಚ್ಚಾ ವಸ್ತುಗಳನ್ನು ಖರೀದಿಸಿದ್ದರು. ಯೂಟ್ಯೂಬ್ ಮೂಲಕ ನಕಲಿ ಕರೆನ್ಸಿ ಮುದ್ರಿಸುವುದನ್ನು ಕಲಿತರು. ಈತ ಕಳೆದ ಮೂರು ತಿಂಗಳಿಂದ ಚೆರ್ಕಳದಲ್ಲಿರುವ ತನ್ನ ಪ್ರಿಂಟಿಂಗ್ ಪ್ರೆಸ್ನಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ.
ಆರೋಪಿಗಳು ಉತ್ತಮ ಗುಣಮಟ್ಟದ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು (ಎಫ್‌ಐಸಿಎನ್) ಪ್ರಿಂಟ್ ಮಾಡಿದ್ದು, ಇದು ನಕಲಿ ಎಂದು ಕಂಡುಹಿಡಿಯುವುದು ಸಾಮಾನ್ಯ ಜನರಿಗೆ ಕಷ್ಟಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರ ಮೂವರು ಆರೋಪಿಗಳು ಈತನಿಗೆ ನಕಲಿ ನೋಟು ಚಲಾವಣೆ ಮಾಡಲು ಸಹಕರಿಸಿದ್ದರು.
25 ಸಾವಿರ ನಗದು ನೀಡಿ 1 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ ವೇಳೆ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸರು ಲಾಡ್ಜ್‌ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವ ಸಾಧ್ಯತೆಗಳಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಆರೋಪಿಗಳಿಂದ 9,030 ರೂಪಾಯಿ ನಗದು ಮತ್ತು ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.