ಬೆಂಗಳೂರು:- ರಾಜ್ಯ ರಾಜಕೀಯಲ್ಲಿ ಮುಡಾ ಹಗರಣ ಭಾರೀ ಸದ್ದು ಮಾಡುತ್ತಿದ್ದು, ಸರ್ಕಾರ ವಜಾಗೊಳ್ಳುವ ಆತಂಕದಲ್ಲಿ ಕಾಂಗ್ರೆಸ್ ಮುಖಂಡರು ಇದ್ದಾರೆ.ಗ್ಯಾರಂಟಿಗಳಿಂದಲೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮುಡಾ ಹಗರಣ ತಲೆ ನೋವಾಗಿ ಪರಿಣಮಿಸಿದೆ. ಈ ಹೊತ್ತಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಅನುಮತಿ ಕೊಟ್ಟ ಬಳಿಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿದೆ.
ಅಲ್ಲದೇ ಸಿದ್ದರಾಮಯ್ಯ ಪರ ನಿಂತಿರುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದಾದ್ಯಂತ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನೂ ಪ್ರತಿಭಟನೆ ಮತ್ತೊಂದು ಹಂತಕ್ಕೆ ಹೋಗುವ ಸಾಧ್ಯತೆ ಇದ್ದು, ಸಿದ್ದರಾಮಯ್ಯ ಪರ ಪ್ರತಿಭಟನೆಗೆ ಬರದಿದ್ದರೆ ಗೃಹಲಕ್ಷ್ಮಿ, ಅಕ್ಕಿ ದುಡ್ಡು, ಉಚಿತ ಕರೆಂಟ್ ಸೇರಿ ಗ್ಯಾರಂಟಿ ಬಂದ್ ಆಗುವ ಎಚ್ಚರಿಕೆ ನೀಡಲಾಗಿದೆ.
ರಾಜಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ರಾಜ್ಯದ ಬಹುತೇಕ ಕಡೆ ಪ್ರತಿಭಟನೆ ನಡೆಸಲಾಗಿದೆ.ಸಿಎಂ ಪರವಾದ ಪ್ರತಿಭಟನೆಯಲ್ಲಿ ಭಾಗವಹಿಸದಿದ್ದರೆ ಸರ್ಕಾರದಿಂದ ನೀಡಲಾಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಲಾಗುವುದು ಎಂದು ಡಂಗೂರ ಸಾರಲಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಿನ್ನದಗುಡಿಹುಂಡಿ ಗ್ರಾಮದಲ್ಲಿ ಡಂಗೂರ ಸಾರಿ ಗ್ರಾಮಸ್ಥರನ್ನು ಪ್ರತಿಭಟನೆಗೆ ಕರೆಯಲಾಗಿದೆ. ಡಂಗೂರ ಸಾರಿ ವ್ಯಕ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಡೆಯುವ ಪ್ರತಿಭಟನೆಗೆ ಬರಬೇಕಂತೆ. ಇಲ್ಲವಾದಲ್ಲಿ ಗೃಹಲಕ್ಷ್ಮಿ ಯೋಜನೆ 2000 ರೂ., ಉಚಿತ ಪ್ರಯಾಣದ ಶಕ್ತಿ ಯೋಜನೆ, ಅಕ್ಕಿ ದುಡ್ಡು, ಉಚಿತ ಕರೆಂಟ್ ಸೇರಿ ಎಲ್ಲ ಗ್ಯಾರಂಟಿ ನಿಂತು ಹೋಗುತ್ತವೆ ಎಂದು ಹೇಳಿ ಡಂಗೂರ ಸಾರಿ ಪ್ರಚಾರ ಮಾಡಿದ್ದಾರೆ. ಇನ್ನೂ ಈ ಡಂಗುರ ಸಾರಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.