ಅವ್ಯವಹಾರಕ್ಕೆ “ಸಾಥ್” ಪಡೆಯಲು ಪುರಸಭೆ ಸಭೆ- ಆಪ್ತ ಸಹಾಯಕನೇ ಈಗ ಪುರಸಭೆ ಮುಖ್ಯಾಧಿಕಾರಿ….
ನವಲಗುಂದ: ಪಾರಂಪರಿಕ ಗುಡ್ಡದ ಮಣ್ಣನ್ನ ರಸ್ತೆ ಮಾಡುವುದಾಗಿ ಅಕ್ರಮ ಸಾಗಾಟ ಮಾಡುತ್ತಿದದ್ದು ಬೆಳಕಿಗೆ ಬಂದ ತಕ್ಷಣವೇ, ಇದೀಗ ಬೇಲಿಯೇ ಎದ್ದು ಹೊಲ ಮೇಯಿಸಲು ಮುಂದಾದ ಸೋಜಿಗದ ಘಟನೆ ಕಂಡು ಬಂದಿದೆ.
ಹಾಲಿ ಶಾಸಕರ ಆಪ್ತ ಸಹಾಯಕನಾಗಿದ್ದ ಶರಣಪ್ಪ ಪೂಜಾರ ಅವರನ್ನೇ ಇದೀಗ ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿಯನ್ನಾಗಿ ಮಾಡಲಾಗಿದೆ. ಹಾಗಾಗಿಯೇ ಕಾನೂನು ಬಾಹಿರ ಚಟುವಟಿಕೆ ಆರಂಭಗೊಂಡಿದೆ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.
ಕಳೆದ ಎರಡು ದಿನದ ಹಿಂದೆ ಮಾಜಿ ಸಚಿವರು ನವಲಗುಂದ ಗುಡ್ಡಕ್ಕೆ ಏಕಾಏಕಿ ಭೇಟಿ ನೀಡಿದಾಗ ಗುಡ್ಡದ ಮಣ್ಣನ್ನ ಸಾಗಾಟ ಮಾಡಿ, ನಗರೋತ್ಥಾನ ರಸ್ತೆಗೆ ಹಾಕಲಾಗುತ್ತಿತ್ತು. ರೈತರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಜೊತೆಗೆ ಉಚಿತ ಮಣ್ಣನ್ನ ಹಾಕಿ, ಅದೇ ರಸ್ತೆಗೆ ಲಕ್ಷಾಂತರ ರೂಪಾಯಿ ಬಿಲ್ ಎತ್ತುವ ಹುನ್ನಾರ ಕೂಡ ಬಹಿರಂಗವಾಗಿತ್ತು.
ಅಕ್ರಮ ಮಾಡಿದ್ದನ್ನ ರೈತರ ಮೇಲೆ ಹಾಕುವ ಸಮಯದಲ್ಲಿ ತಮ್ಮದೇ ಪಕ್ಷದ ಆಡಳಿತವಿರುವ ನಗರಸಭೆಯ ಸಾಮಾನ್ಯ ಸಭೆಯನ್ನ 26.08.2024ರಂದು ಕರೆದು, ಅದರಲ್ಲಿ 7ನೇಯದ್ದಾಗಿ ಗುಡ್ಡದ ಮಣ್ಣನ್ನ ಬಳಕೆ ಮಾಡುವ ಕುರಿತು ಚರ್ಚಿಸಲು ಮುಂದಾಗಿದ್ದಾರೆ. ಈ ಮೂಲಕ ಪುರಸಭೆ ಯಾವುದೇ ಪರವಾನಿಗೆಯನ್ನ ಮತ್ತೂ ಠರಾವನ್ನ ಮಾಡಿರಲಿಲ್ಲ ಎಂಬುದು ಸಾಬೀತಾಗಿದೆ.
ಪುರಸಭೆಯ ಮುಖ್ಯಾಧಿಕಾರಿ ಶರಣಪ್ಪ ಪೂಜಾರ ಅವರು ಕೂಡಾ ಕಾನೂನು ಬಾಹಿರವಾಗಿ ನಡೆದಿರುವುದನ್ನ ಸಭೆಯ ನೋಟೀಸ್ ಜಾರಿ ಮಾಡುವ ಮೂಲಕ ಸಾಬೀತು ಮಾಡಿದ್ದಾರೆ.
ಪಾರಂಪರಿಕವಾಗಿ ಉಳಿಯಬೇಕಾದ ಗುಡ್ಡವನ್ನ, ಉಳಿಸಬೇಕಾದ ಫುರಸಭೆಯ ಹಾಳು ಮಾಡಲು ಹೊರಟಿರುವುದು ಅಚ್ಚರಿಯ ಸಂಗತಿಯಾಗಿದೆ.