ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಖಾಸಗಿ ದೂರನ್ನು ಆಧರಿಸಿ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ. ತನಿಖೆಯ ವ್ಯಾಪ್ತಿ, ಯಾವ ಸಂಸ್ಥೆ ತನಿಖೆ ನಡೆಸಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ.
ಸಿದ್ದರಾಮಯ್ಯ ಉರುಳಿಸುತ್ತಿರುವ ಒಂದೊಂದೂ ರಾಜಕೀಯ ದಾಳಗಳಿಗೆ ಕಾಂಗ್ರೆಸ್ ನ ಘಟಾನುಘಟಿ ನಾಯಕರೇ ಕಂಗಾಲಾಗಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದು ಹೋರಾಟ ನಡೆಸಿವೆ.
ಇದರ ನಡುವೆ ಗಡೇ ದುರ್ಗಾದೇವಿ ಪೂಜಾರಿ ಕನಸಿನಲ್ಲಿ ಡಿ.ಕೆ ಶಿವಕುಮಾರ್ ರಾಜ್ಯದ ಸಿಎಂ ಆಗುವ ವಾಣಿ ನುಡಿದೆಯಂತೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಶಕ್ತಿ ದೇವತೆ ಗಡೇ ದುರ್ಗಾದೇವಿಯ ಪರಮ ಭಕ್ತನಾಗಿದ್ದಾರೆ.
ಈ ಹಿಂದೆ ಡಿಸಿಎಂ ಗಡೇ ದುರ್ಗಾದೇವಿಯ ಆಶೀರ್ವಾದ ಪಡೆದುಕೊಂಡಿದ್ದರು. ಐಟಿ, ಇಡಿ ಕೇಸ್ ನಲ್ಲಿ ಸಂಕಷ್ಟಕೀಡಾದಾಗ ಗಡೇ ದುರ್ಗಾದೇವಿ ಮೊರೆ ಹೋಗಿದ್ದ ಡಿಕೆಶಿ, 29 ಜನವರಿ 2020 ರಂದು ಗಡೇ ದುರ್ಗಾದೇವಿ ಜಾತ್ರೆಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು.
ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಸಂಕಷ್ಟದಿಂದ ಪಾರು ಮಾಡಿ, ರಾಜಕೀಯದಲ್ಲಿ ಉನ್ನತ ಸ್ಥಾನ ದೊರೆಯುವಂತೆ ಪತ್ರ ಬರೆದು ಪೂಜೆ ಸಲ್ಲಿಸಿದ್ದರಂತೆ. ಸದ್ಯ ದೇವಸ್ಥಾನದ ಅರ್ಚಕ ಮಾಹಾದೇವಪ್ಪ ಪೂಜಾರಿಯಿಂದ ಅಚ್ಚರಿ ಭವಿಷ್ಯ ವಾಣಿ ನುಡಿದಿದ್ದಾರೆ.
ಗಡೇ ದುರ್ಗಾದೇವಿ ಪೂಜಾರಿಗಳು ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಇಬ್ಬರಿಗೆ ಸಿಎಂ ಸ್ಥಾನ ಎಂದು ಭವಿಷ್ಯ ನುಡಿದಿದ್ದರು. ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗ್ತಾರೆ, ಎರಡನೇ ಅವಧಿಗೆ ಡಿಕೆ ಶಿವಕುಮಾರ್ ಸಿಎಂ ಎಂದು ಭವಿಷ್ಯ ನುಡಿದಿದ್ದರು.
ಸದ್ಯ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡುವೆ ಡಿಕೆ ಶಿವಕುಮಾರ್ ಅವರ ಸಿಎಂ ಆಗುವ ಭವಿಷ್ಯ ವಾಣಿ ಭಾರೀ ಚರ್ಚೆಗೆ ಕಾರಣವಾಗಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ಸಿಕ್ಕ ಬಳಿಕ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪೂಜಾರಿಗಳು, ಅಮ್ಮ ಕನಸಿನಲ್ಲಿ ಬಂದು 9 ಮಂದಿ ಸಿಎಂ ಅಂತ ಹೇಳಿದ್ರು, ನಾನು ಬೇಡ ಇಬ್ಬರನ್ನು ಮಾತ್ರ ಹೇಳಿ ಅಂದೇ. ಆಗ ನಮ್ಮಲ್ಲಿಗೆ ಬಂದವರಿಗೆ ಹೂವಿನ ಹಾರಾ ಹಾಕಲು ಅಮ್ಮ ಹೇಳಿದ್ದಳು. ಕಾಂಗ್ರೆಸ್ ನಲ್ಲೇ ಸಮಿಶ್ರ ಸರ್ಕಾರ ಅಂತ ಅಮ್ಮ ಹೇಳಿದ್ದಾರೆ, ಈಗ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ, ಈಗ ಡಿಕೆ ಶಿವಕುಮಾರ್ ಅವರಿಗೆ ಹಾರ ಹಾಕಬೇಕು ಎಂದು ಹೇಳಿದ್ದಾರೆ.