ಸಾಕಷ್ಟು ಸಲಹೆ, ಸಮಾಲೋಚನೆಗಳ ಬಳಿಕ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಅನುಮೋದನೆ ನೀಡಲಾಗಿದೆ. ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 25 ವರ್ಷ ಕೆಲಸ ಮಾಡುವ ನೌಕರರಿಗೆ ಪೂರ್ಣ ಪಿಂಚಣಿ ಸಿಗಲಿದೆ ಎಂದು ಸರ್ಕಾರ ಹೇಳಿದೆ. ಯುಪಿಎಸ್ ಯೋಜನೆಯಿಂದ 23 ಲಕ್ಷ ಕೇಂದ್ರ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆಯು 2025ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಪ್ರತಿಪಕ್ಷಗಳು ಹಳೆಯ ಪಿಂಚಣಿ ಯೋಜನೆಯಲ್ಲಿ ರಾಜಕೀಯ ಮಾಡುತ್ತಿವೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ನಮ್ಮ ಉದ್ಯೋಗಿಗಳ ಬಗ್ಗೆ ನಾವು ಗಂಭೀರವಾಗಿರುತ್ತೇವೆ. ಹೀಗಾಗಿ, ಏಕೀಕೃತ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. 25 ವರ್ಷ ಕೆಲಸ ಮಾಡಿದ ಪ್ರತಿಯೊಬ್ಬ ನೌಕರನಿಗೆ ಪೂರ್ಣ ಪಿಂಚಣಿ ಸಿಗಲಿದೆ.
10 ವರ್ಷ ಸೇವೆ ಸಲ್ಲಿಸಿದವರಿಗೆ 10 ಸಾವಿರ ಪಿಂಚಣಿ ಸಿಗಲಿದೆ. ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ ಅವರ ಪತ್ನಿಯರಿಗೆ ಶೇ.60ರಷ್ಟು ಪಿಂಚಣಿ ನೀಡಲಾಗುವುದು. ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರವೂ ಜಾರಿಗೊಳಿಸಬಹುದು ಎಂದು ಸರ್ಕಾರ ಹೇಳಿದೆ. ಈ ಯೋಜನೆಯಿಂದ ನೌಕರರ ಮೇಲೆ ಯಾವುದೇ ಹೊರೆ ಇರುವುದಿಲ್ಲ.
ಒಬ್ಬ ಉದ್ಯೋಗಿ ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ವೇತನದ ಕನಿಷ್ಠ ಶೇ. 50ರಷ್ಟನ್ನು ಪಿಂಚಣಿಯಾಗಿ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಒಬ್ಬ ಪಿಂಚಣಿದಾರನು ಮರಣ ಹೊಂದಿದರೆ, ಅವನ ಕುಟುಂಬವು ಮರಣದ ಸಮಯದಲ್ಲಿ ಪಡೆದ ಪಿಂಚಣಿಯ ಶೇ. 60ರಷ್ಟನ್ನು ಪಡೆಯುತ್ತದೆ.
ಎಲ್ಲಾ ಎನ್‌ಪಿಎಸ್ ಜನರು ಯುಪಿಎಸ್‌ಗೆ ಹೋಗುವ ಆಯ್ಕೆಯನ್ನು ಪಡೆಯುತ್ತಾರೆ. NPS ಪ್ರಾರಂಭವಾದಾಗಿನಿಂದ ನಿವೃತ್ತರಾದ ಅಥವಾ ನಿವೃತ್ತಿ ಹೊಂದಲಿರುವ ಎಲ್ಲರಿಗೂ ಇದು ಅನ್ವಯಿಸುತ್ತದೆ. ಇದಕ್ಕೆ ಸರ್ಕಾರವೇ ಬಾಕಿ ಪಾವತಿಸಲಿದೆ. 2004ರಿಂದ ನಿವೃತ್ತರಾದ ನೌಕರರು ಸಹ ಈ ಪ್ರಯೋಜನವನ್ನು ಪಡೆಯುತ್ತಾರೆ. ಪ್ರತಿ 6 ತಿಂಗಳ ಸೇವೆಗೆ ನಿವೃತ್ತಿಯ ನಂತರ ಮಾಸಿಕ ಸಂಬಳದ 10ನೇ ಒಂದು ಭಾಗವನ್ನು (ಸಂಬಳ ಮತ್ತು ಡಿಎ) ಸೇರಿಸಲಾಗುತ್ತದೆ. NPS ಜನರು UPSಗೆ ಬದಲಾಯಿಸುವ ಮೂಲಕ ಪ್ರಯೋಜನ ಪಡೆಯುತ್ತಾರೆ.