ಹಾವೇರಿ: ಬೆಳಗಾವಿಯಲ್ಲಿ ಅಜ್ಜಿಯೊಬ್ಬರು ತಾವು ಕೂಡಿಟ್ಟ ಗೃಹಲಕ್ಷ್ಮೀ ಯೋಜನೆ ಹಣದಲ್ಲಿ ಊರಿಗೆ ಹೋಳಿಗೆ ಊಟ ಹಾಕಿಸಿ ಊರ ಜನರ ಮನಸ್ಸುಗೆದ್ದಿದ್ದರು. ಇದೀಗ ಗೃಹ ಲಕ್ಷ್ಮಿ ಯೋಜನೆ ಹಣ ಕೂಡಿಟ್ಟು ಸೊಸೆಗೆ ಅತ್ತೆಯೊಬ್ಬರು ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾರೆ.
ಹೌದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಗೃಹಲಕ್ಷ್ಮೀ ಹಣದಿಂದ ಪ್ಯಾನ್ಸಿ ಸ್ಟೋರ್ ಪ್ರಾರಂಭವಾಗಿದೆ. ಸೊಸೆ ಹೊರಗೆ ಕೆಲಸಕ್ಕೆ ಹೋಗಬಾರದು ಎಂದು ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟ ಅತ್ತೆ ಕಾರ್ಯಕ್ಕೆ ಈಗ ಜನ ಶಹಬ್ಬಾಸ್ ಅಂತಿದ್ದಾರೆ. ನೀರಲಗಿ ಗ್ರಾಮದ ದ್ರಾಕ್ಷಾಯಿಣಿ ತಮ್ಮ 10 ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟಿದ್ದರು.
10 ಕಂತಿನ 20,000 ರೂಪಾಯಿ ಹಣ ಕೂಡಿಟ್ಟು ಸೊಸೆ ಕುಮಾರಿ ಶಿವನಗೌಡ ಪಾಟೀಲ್‌ಗೆ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟಿದ್ದಾರೆ. ಶ್ರಾವಣ ಮಂಗಳವಾರದ ಶುಭದಿನದಂದೇ ಫ್ಯಾನ್ಸಿ ಸ್ಟೋರ್‌ಗೆ ಪೂಜೆ ಮಾಡಿ ಚಾಲನೆ ನೀಡಿದರು. ಸಂಭ್ರಮದಿಂದ ಫ್ಯಾನ್ಸಿ ಸ್ಟೋರ್ ಶುರು ಮಾಡಿದ ಅತ್ತೆ-ಸೊಸೆ ಪರಸ್ಪರ ಭಾವುಕರಾದರು. ಸೊಸೆ ಮಗಳಿದ್ದಂಗೆ, ಅವಳು ಹೊರಗೆ ದುಡಿಯೋಕೆ ಹೋಗೋದು ಬೇಡ ಅಂತಾ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾರೆ.