ಪ್ರಿಯಕರನೊಂದಿಗೆ ಓಡಿ ಹೋಗಲು 3 ವರ್ಷದ ಮುದ್ದು ಮಗುವನ್ನು ಕೊಂದ ತಾಯಿ!

Share to all

ಪಾಟ್ನಾ: ಟಿವಿಯಲ್ಲಿ ಬರುವ ಕ್ರೈಮ್ ಸೀರೀಸ್ ನೋಡಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಬಳಿ ಹೋಗಲು ಅಡ್ಡಿಯಾಗಿದ್ದ 3 ವರ್ಷದ ಮಗುವನ್ನು ಕತ್ತು ಸೀಳಿ ಹತ್ಯೆಗೈದು ಸೂಟ್‍ಕೇಸ್‍ಗೆ ತುಂಬಿ ಪೊದೆಗೆ ಎಸೆದ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. ಈ ಸಂಬಂಧ ಹತ್ಯೆಗೀಡಾದ ಮಗುವಿನ ತಾಯಿ ಕಾಜಲ್‍ಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ತನಿಖೆ ವೇಳೆ ಮಹಿಳೆ ವಿವಾಹೇತರ ಸಂಬಂಧ ಹೊಂದಿದ್ದು, ಪತಿಯನ್ನು ತೊರೆದು ಪ್ರಿಯಕರನೊಂದಿಗೆ ತೆರಳಲು ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರನಿಗೆ ಮಗಳು ಬರಲು ಇಷ್ಟವಿರಲಿಲ್ಲ. ಹೀಗಾಗಿ ಮಗುವನ್ನು ಕೊಲೆಗೈದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಟಿವಿಯಲ್ಲಿ ಬರುವ ಕ್ರೈಮ್ ಸೀರೀಸ್ ನೋಡಿದ ನಂತರ ಮಗಳ ಕೊಲೆಗೆ ಯೋಜನೆ ಹಾಕಿದ್ದಾಗಿ ಮಹಿಳೆ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ. ಶನಿವಾರ ಮುಜಾಫರ್‍ಪುರದ ಮಿನಾಪುರದ ವಸತಿ ಪ್ರದೇಶದಲ್ಲಿ ಮೂರು ವರ್ಷದ ಮಗುವಿನ ಮೃತದೇಹ ಕೆಂಪು ಸೂಟ್‍ಕೇಸ್‍ನಲ್ಲಿ ಪತ್ತೆಯಾಗಿತ್ತು. ಮಗುವಿನ ಮೃತದೇಹ ಪತ್ತೆಯಾಗಿರುವುದನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಬಳಿಕ ಪೊಲೀಸರು ತನಿಖೆ ಕೈಗೊಂಡಾಗ ಮಗುವಿನ ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿತ್ತು.

ಆರೋಪಿ ಕಾಜಲ್‍ನ ಪತಿ ಮನೋಜ್ ನೀಡಿದ ದೂರಿನ ಮೇಲೆ ಪೊಲೀಸರು ಮಹಿಳೆಯ ಫೋನ್ ಟ್ರ್ಯಾಕ್ ಮಾಡಿದಾಗ, ಆಕೆ ತನ್ನ ಪ್ರಿಯಕರನ ಮನೆಯಲ್ಲಿರುವುದು ಪತ್ತೆಯಾಗಿತ್ತು. ಬಳಿಕ ಅಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಮಹಿಳೆಯ ಪ್ರಿಯಕರನ ಪಾತ್ರ ಕಂಡು ಬಂದಿಲ್ಲ. ಇದರಿಂದ ಆತನನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 


Share to all

You May Also Like

More From Author