ಬೆಂಗಳೂರು: ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚೇರ್ ಮೇಲೆ ಕುಳಿತುಕೊಂಡು ಸಿಗರೇಟು ಸೇದುವ ಫೋಟೋ ವೈರಲ್ ಆಗಿದೆ. ರೌಡಿಗಳ ಜೊತೆಗೆ ಕುಳಿತುಕೊಂಡು ಟೀ ಜೊತೆಗೆ ಸಿಗರೇಟು ಸೇದುತ್ತಿರುವ ಸಂಗತಿ ಬಟಾ ಬಯಲಾಗಿದೆ. ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಜೊತೆಗೆ ಎಂಜಾಯ್ ಮಾಡುವ ದೃಶ್ಯ ಸಮೇತ ಸಿಕ್ಕಿದೆ. ಇದರಿಂದ ದರ್ಶನ್ ಬಳ್ಳಾರಿ ಶಿಫ್ಟ್ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನ ಸಿಬ್ಬಂದಿ ಮತ್ತು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್ ಮತ್ತು ಗ್ಯಾಂಗ್‌ಗೆ ಸೆಪ್ಟೆಂಬರ್ 9ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ನ್ಯಾಯಾಂಗ ಬಂಧನ ಅಂತ್ಯವಾಗಿದ್ದ ಹಿನ್ನೆಲೆಯಲ್ಲಿ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಆರೋಪಿಗಳನ್ನು ಪುನಃ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡರು. ಮನವಿ ಪುರಸ್ಕರಿಸಿದ ನ್ಯಾಯಾಧೀಶರು ದರ್ಶನ್ ಮತ್ತು ಗ್ಯಾಂಗ್‌ನ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಮತ್ತೆ ಆದೇಶ ಹೊರಡಿಸಿದ್ದಾರೆ. ನ್ಯಾಯಾಂಗ ಬಂಧನ ವಿಸ್ತರಣೆಗೊಂಡ ಬೆನ್ನಲ್ಲೇ ದರ್ಶನ್ ಅವರನ್ನು ಇಂದೇ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಶಿರಾ ತುಮಕೂರು ಮಾರ್ಗವಾಗಿ ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಕರತರಲಾಗುತ್ತದೆ.