ಎಲ್ಲಾ ಮಾದರಿಯ ಕ್ರಿಕೆಟ್ಗೆ ಟೀಂ ಇಂಡಿಯಾದ ಎಡಗೈ ವೇಗದ ಬೌಲರ್ ಬರೀಂದರ್ ಸಿಂಗ್ ಸ್ರಾನ್ ವಿದಾಯ ಹೇಳಿದ್ದಾರೆ. ಬಹಳ ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗಿದ್ದ ಬರೀಂದರ್, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ಮೂಲಕ ಇಂದು ಒಂದೇ ದಿನ ಮೂವರು ಕ್ರಿಕೆಟಿಗರು ವೃತ್ತಿಜೀವನಕ್ಕೆ ವಿದಾಯ ಹೇಳಿದಂತ್ತಾಗಿದೆ. ಬರೀಂದರ್ ಸಿಂಗ್ ಸ್ರಾನ್ ಅವರಿಗೂ ಮೊದಲು ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ವಿಲ್ ಪುಕೊವ್ಸ್ಕಿ ಮತ್ತು ವೆಸ್ಟ್ ಇಂಡೀಸ್ ತಂಡದ ಶಾನನ್ ಗೇಬ್ರಿಯಲ್ ಕೂಡ ನಿವೃತ್ತಿ ಘೋಷಿಸಿದ್ದರು.
ಇನ್ನು ತಮ್ಮ ನಿವೃತ್ತಿಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬರೀಂದರ್, ‘ನಾನು ಅಧಿಕೃತವಾಗಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದೇನೆ. ಈ ಪ್ರಯಾಣಕ್ಕಾಗಿ ನಾನು ಹೃತ್ಪೂರ್ವಕವಾಗಿ ಕೃತಜ್ಞನಾಗಿದ್ದೇನೆ. 2009 ರಲ್ಲಿ ಬಾಕ್ಸಿಂಗ್‌ನಿಂದ ನನ್ನ ಬದುಕನ್ನು ಕ್ರಿಕೆಟ್ನತ್ತ ತಿರುಗಿಸಿದ ನಂತರ, ಕ್ರಿಕೆಟ್ ನನಗೆ ಲೆಕ್ಕವಿಲ್ಲದಷ್ಟು ಮತ್ತು ನಂಬಲಾಗದ ಅನುಭವಗಳನ್ನು ನೀಡಿದೆ. ವೇಗದ ಬೌಲಿಂಗ್ ಶೀಘ್ರದಲ್ಲೇ ನನ್ನ ಅದೃಷ್ಟವನ್ನು ಬದಲಿಸಿತು.
ಆ ಬಳಿಕ ಐಪಿಎಲ್ ಫ್ರಾಂಚೈಸಿಯನ್ನು ಪ್ರತಿನಿಧಿಸಲು ಬಾಗಿಲು ತೆರೆಯಿತು. ನಂತರ 2016 ರಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ ಸಿಕ್ಕಿತು. ನನ್ನ ಅಂತರರಾಷ್ಟ್ರೀಯ ವೃತ್ತಿಜೀವನವು ಚಿಕ್ಕದಾಗಿದ್ದರೂ, ಅಲ್ಲಿ ಸಿಕ್ಕ ನೆನಪುಗಳು ಯಾವಾಗಲೂ ಸ್ಮರಣೀಯವಾಗಿರತ್ತವೆ. ನನ್ನ ಪ್ರಯಾಣದುದ್ದಕ್ಕೂ ನನಗೆ ಬೆಂಬಲ ನೀಡಿದ ತರಬೇತುದಾರರು ಮತ್ತು ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಈ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದಂತೆ, ಕ್ರಿಕೆಟ್ ನನಗೆ ನೀಡಿದ ಅವಕಾಶಗಳಿಗಾಗಿ ನಾನು ಅತ್ಯಂತ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.