ಅಹಮದಾಬಾದ್:– ಗುಜರಾತ್ನಲ್ಲಿ ಹೃದಯ ವಿದ್ರಾವಕ ಘಟನೆ ಜರುಗಿದ್ದು, ಮಗನೇ ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿರುವ ಘಟನೆ ಜರುಗಿದೆ. ಅಮ್ಮ- ಮಗನ ಪರಿಶುದ್ಧ ಸಂಬಂಧವನ್ನು ಛಿದ್ರಗೊಳಿಸಿದ ಈ ಕತೆ ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ. ಈ ಕೊಲೆ ಮಾಡಿದ ಬಳಿಕ ಆ ಯುವಕ ಅಮ್ಮನೊಂದಿಗಿನ ತನ್ನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ನಿನ್ನನ್ನು ಕೊಂದಿದ್ದಕ್ಕೆ ನನ್ನ ಕ್ಷಮಿಸಿ ಬಿಡು ಅಮ್ಮ ಎಂದು ಕ್ಯಾಪ್ಷನ್ ಹಾಕಿದ್ದಾನೆ.
ಘಟನೆ ಬಗ್ಗೆ ಸ್ಥಳೀಯರು ಪೊಲೀಸರಿಸಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಆರೋಪಿ ನೀಲೇಶ್ ಗೋಸಾಯಿ ಎಂಬಾತ ವಿಶ್ವವಿದ್ಯಾನಿಲಯ ರಸ್ತೆಯ ಭಗತ್‍ಸಿಂಗ್‍ಜಿ ಗಾರ್ಡನ್‍ನಲ್ಲಿರುವ ಮನೆಯಲ್ಲಿ ತನ್ನ ತಾಯಿಯ ಮೃತದೇಹದ ಪಕ್ಕ ಕುಳಿತಿದ್ದ.
ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಮೊದಲು ತಾಯಿಯ ಮೇಲೆ ಚಾಕುವಿನಿಂದ ತಿವಿಯಲು ಯತ್ನಿಸಿದ. ತಾಯಿ ಜ್ಯೋತಿಬಾಯಿ ಆತನಿಂದ ಚಾಕು ಕಿತ್ತುಕೊಂಡಾಗ, ಹೊದಿಕೆಯಿಂದ ಉಸಿರುಗಟ್ಟಿಸಿ ತಾಯಿಯನ್ನು ಹತ್ಯೆ ಮಾಡಿದ ಎಂದು ಪೊಲೀಸರು ವಿವರಿಸಿದ್ದಾರೆ.
ಈ ಅಪರಾಧ ಎಸಗಿದ ಬಳಿಕ ತನ್ನ ತಾಯಿಯ ಫೋಟೊವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಈತ, “ಅಮ್ಮಾ ದಯವಿಟ್ಟು ಕ್ಷಮಿಸಿ, ನಾನು ನಿಮ್ಮನ್ನು ಕಳೆದುಕೊಂಡಿದ್ದೇನೆ. ಓಂ ಶಾಂತಿ” ಎಂದು ವಿವರಿಸಿದ್ದ. ಮತ್ತೊಂದು ಪೋಸ್ಟ್ ನಲ್ಲಿ, “ನಾನು ತಾಯಿಯನ್ನು ಕೊಂದೆ. ನನ್ನ ಬದುಕು ಕಳೆದುಕೊಂಡೆ. ಅಮ್ಮಾ ಕ್ಷಮಿಸಿ, ಓಂ ಶಾಂತಿ, ನಿಮ್ಮನ್ನು ಅಗಲಿದ್ದೇನೆ” ಎಂದು ಬರೆದು ಕೊಂಡಿದ್ದು, ಸಧ್ಯ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ.