ಚಿಕ್ಕಬಳ್ಳಾಪುರ: ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಂಚನೆ ಮಾಡಿರುವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಮಲ ಎಂಬ ಮಹಿಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮೂಲದ ಫಾರ್ಮಸಿಸ್ಟ್ ರಾಘವೇಂದ್ರ ಎನ್ನುವವರನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ಅವರಿಂದ ಏಳೂವರೆ ಲಕ್ಷ ರೂಪಾಯಿ ಹಣ ಪೀಕಿದ್ದಾಳೆ.
ಹಣ ಅಕೌಂಟ್‌ಗೆ ಬರುತ್ತಿದ್ದಂತೆ ಅವರ ಪೋನ್ ನಂಬರ್ಗಳನ್ನು ಬ್ಲಾಕ್ ಮಾಡಿ ಜೂಟ್ ಆಗಿದ್ದಾಳೆ. ಈ ಪ್ರಕರಣ ದಾಖಲಿಸಿಕೊಂಡು ಚಿಕ್ಕಬಳ್ಳಾಪುರ ಸೈಬರ್‌ಠಾಣೆ ಪೊಲೀಸರು, ಮದನಾರಿ ಕೋಮಲರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈಕೆ ಮದುವೆ ಮಾಡಿಕೊಳ್ಳುವುದಾಗಿ ಆಮಿಷವೊಡ್ಡಿ ಪುರುಷರನ್ನು ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಬೆಂಗಳೂರಿನ ತಾವರೆಕೆರೆ ಮೂಲದ ಮಧುಸೂಧನ್ ಎನ್ನುವವರನ್ನು ಮದುವೆಯಾಗಿ ಆತನಿಂದ ಹತ್ತು ಲಕ್ಷ ರೂಪಾಯಿ ಹಣ, ಚಿನ್ನಾಭರಣ ಲಪಟಾಯಿಸಿದ್ದಾಳೆ. ಬೆಂಗಳೂರಿನ ಉದ್ಯಮಿ ನಾಗರಾಜ್, ಕುಂದಾಪುರದ ರಾಘವೇಂದ್ರ, ಗೌರಿಬಿದನೂರಿನ ರಾಘವೇಂದ್ರ ಎಲ್ಲರಿಗೂ ಪಂಗನಾಮ ಹಾಕಿದ್ದಾಳೆ. ಇನ್ನು ಇಬ್ಬರಿಗೆ ಮದುವೆ ಮಾಡಿಕೊಳ್ಳುವುದಾಗಿ ಆಮಿಷವೊಡ್ಡಿದ್ದಳು. ಅಷ್ಟರಲ್ಲಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.