ಕಣ್ಣುಗಳ ಮೇಲೆ ಒತ್ತಡ, ಆಯಾಸ ಹೆಚ್ಚಿದಾಗ, ನೇತ್ರಗಳಲ್ಲಿ ಶುಷ್ಕತೆಯಿದ್ದರೆ, ಅತಿಯಾದ ಕೆಫೇನ್ ಅಥವಾ ಆಲ್ಕೊಹಾಲ್ ಸೇವನೆ, ನಿರ್ಜಲೀಕರಣ- ಇಂಥ ಸಂದರ್ಭಗಳಲ್ಲಿ ಕಣ್ಣುಗಳು ಅದುರುವುದಿದೆ. ಇದಲ್ಲದೆಯೂ ಬೇರೆ ಕಾರಣಗಳು ಇರಬಹುದು. ವಿಟಮಿನ್ ಬಿ12 ಕೊರತೆ, ಸ್ಕ್ರೀನ್‌ಗಳನ್ನು ಅತಿಯಾಗಿ ನೋಡಿದಾಗ ಉಂಟಾಗುವ ಆಯಾಸ, ಒತ್ತಡ, ಧೂಮಪಾನ, ಖಿನ್ನತೆಯಂಥ ಕಾರಣಗಳಿಗೂ ಕಣ್ಣು ಅದುರಬಹುದು.
ಕಣ್ಣುಗಳು ನಮ್ಮ ಮಾತಿಗೆ ಬೆಲೆ ಕೊಡದಂತೆ ತಮ್ಮಷ್ಟಕ್ಕೆ ತಾವೇ ಅದುರುತ್ತಿದ್ದರೆ, ಕಿರಿಕಿರಿಯ ಸಂಗತಿಯದು. ಒಂದೊಮ್ಮೆ ಕಣ್ಣು ಒಣಗಿದಂತಾಗಿ ಅದುರುತ್ತಿದ್ದರೆ, ನೇತ್ರಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳಿ. ಮತ್ತೆ ದೊಡ್ಡದಾಗಿ ಕಣ್ಣಗಲಿಸಿ.
ಇದೊಂದು ರೀತಿಯಲ್ಲಿ ಅತಿಯಾಗಿ ಮಿಟುಕಿಸಿದಂತೆ. ಹೀಗೆ ಮಾಡುವುದರಿಂದ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತವೆ. ಒಣಗಿದ ಅನುಭವ ಕಡಿಮೆಯಾಗುತ್ತದೆ. ಮಾತ್ರವಲ್ಲ, ಕಣ್ಣು ಮತ್ತು ಮುಖದ ಮಾಂಸಖಂಡಗಳಿಗೆ ಸಣ್ಣ ವ್ಯಾಯಾಮವಾದಂತಾಗಿ ಈ ಭಾಗಗಳಲ್ಲಿ ರಕ್ತ ಸಂಚಾರ ವೃದ್ಧಿಯಾಗುತ್ತದೆ.
ಕಣ್ಣಿನ ಸಮಸ್ಯೆಗಳು
ಕಣ್ಣುಗಳಲ್ಲಿ ಸ್ನಾಯು ಸಂಬಂಧಿತ ಸಮಸ್ಯೆ ಇದ್ದರೂ ಕಣ್ಣು ಬಡಿಯಬಹುದು. ನಿಮ್ಮ ಕಣ್ಣು ಬಹಳ ಸಮಯದಿಂದ ಸೆಳೆತಕ್ಕೆ ಒಳಗಾಗಿದ್ದರೆ, ಒಮ್ಮೆ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಿ. ನೀವು ಕನ್ನಡಕವನ್ನು ಧರಿಸಬೇಕಾಗಬಹುದು ಅಥವಾ ಕನ್ನಡಕಗಳ ಸಂಖ್ಯೆಯನ್ನು ಬದಲಾಯಿಸಬೇಕಾಗಬಹುದು. ಯಾವುದಕ್ಕೂ ಒಂದು ಬಾರಿ ವೈದ್ಯರ(Doctor) ಬಳಿ ಪರೀಕ್ಷೆ ನಡೆಸುವುದು ಉತ್ತಮವಾಗಿದೆ.
ಒತ್ತಡ
ಒತ್ತಡವು ನಿಮ್ಮ ಕಣ್ಣನ್ನು ಬಡಿಯುವಂತೆ ಮಾಡಬಹುದು. ಅದರಲ್ಲೂ ಒತ್ತಡ, ನೆಮ್ಮದಿಯಾಗಿ ನಿದ್ದೆ (Sleep) ಮಾಡುವುದನ್ನು ತಡೆದಾಗ ಮತ್ತು ನಿದ್ರೆ ಪೂರ್ಣವಾಗಿರದಿದ್ದಾಗ, ಕಣ್ಣಿನ ಸೆಳೆತ ಉಂಟಾಗಬಹುದು. ಸರಿಯಾಗಿ ನಿದ್ರೆ ಮಾಡದಿದ್ದಾಗ ಕಣ್ಣಿನ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತದೆ. ಇದರಿಂದಾಗಿ ಕಣ್ಣು ಹೊಡೆದುಕೊಳ್ಳಲು ಆರಂಭವಾಗುತ್ತದೆ.
ಆಯಾಸ
ಹೆಚ್ಚು ಆಯಾಸವಾದಾಗ ಕಣ್ಣುಗಳಲ್ಲಿ ಸಮಸ್ಯೆಗಳೂ ಕಾಣಿಸುತ್ತವೆ. ಇದಲ್ಲದೆ, ಕಣ್ಣುಗಳಲ್ಲಿ ಆಯಾಸ ಅಥವಾ ಕಂಪ್ಯೂಟರ್ ಗಳು, ಲ್ಯಾಪ್ ಟಾಪ್ ಗಳಲ್ಲಿ ದೀರ್ಘಕಾಲದ ಕೆಲಸ ಮಾಡುವುದರಿಂದ ಸಹ ಈ ಸಮಸ್ಯೆಯನ್ನು ಉಂಟುಮಾಡಬಹುದು. ಇದಕ್ಕೆ ಕಣ್ಣುಗಳನ್ನು ವಿಶ್ರಾಂತಿ ಗೊಳಿಸಬೇಕಾಗುತ್ತದೆ. ಮೊಬೈಲ್, ಕಂಪ್ಯೂಟರ್ ಮುಂದೆ ಗಂಟೆ ಗಟ್ಟಲೆ ಕೆಲಸ ಮಾಡುವಾಗ ಮಧ್ಯದಲ್ಲಿ ಸ್ವಲ್ಪ ಸಮಯ ಕಣ್ಣಿಗೆ ವಿಶ್ರಾಂತಿ ನೀಡಬೇಕು.
ಶುಷ್ಕತೆ
ಕಣ್ಣುಗಳಲ್ಲಿ ಶುಷ್ಕತೆಯು ಕಣ್ಣಿನ ಸೆಳೆತಕ್ಕೂ ಕಾರಣವಾಗುತ್ತದೆ. ಅಲರ್ಜಿ (Allergy), ನೀರು ಇರುವ ಕಣ್ಣುಗಳು, ತುರಿಕೆ ಮುಂತಾದ ಸಮಸ್ಯೆಗಳು ಇದ್ದರೆ ಸಹ ಸಂಭವಿಸಬಹುದು. ಆದುದರಿಂದ ಇಂತಹ ಸಮಸ್ಯೆ ಕಂಡು ಬಂದರೆ ತಕ್ಷಣ ವೈದ್ಯರ ಬಳಿ ಪರೀಕ್ಷೆ ನಡೆಸಿ. ಇಲ್ಲದಿದ್ದರೆ ಕಣ್ಣಿನ ಅಲರ್ಜಿ ಹೆಚ್ಚುವ ಸಾಧ್ಯತೆ ಇದೆ.
ಪೌಷ್ಟಿಕಾಂಶ
ದೇಹದಲ್ಲಿ ಮೆಗ್ನೀಸಿಯಮ್ ಕೊರತೆಯು ಕಣ್ಣಿನ ಸೆಳೆತಕ್ಕೆ ಕಾರಣವಾಗಬಹುದು. ಅಲ್ಲದೆ ಅತಿಯಾದ ಕೆಫೀನ್ ಅಥವಾ ಆಲ್ಕೋಹಾಲ್ (Alcohol) ಸೇವನೆ ಕೂಡ ಈ ಸಮಸ್ಯೆಗೆ ಕಾರಣವಾಗುತ್ತದೆ. ಹೆಚ್ಚಿನ ಪ್ರಮಾಣದ ಕೆಫೆನ್ ಅಂಶಗಳನ್ನು ಅಥವಾ ಆಲ್ಕೋಹಾಲ್ ಸೇವನೆಯನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.