ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ್ಮೇಲೆ ಪಕ್ಷ ಒಡೆದು ಮೂರು ಬಾಗಿಲಾಗಿದೆ, ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗದಂತಾಗಿದೆ. ಪಕ್ಷದೊಳಗಿನ ಆಂತರಿಕ ಭಿನ್ನಮತ ಶಮನಮಾಡಿ ಎಲ್ಲರನ್ನು ಒಂದು ಮಾಡಲು RSS ಮಧ್ಯ ಪ್ರವೇಶ ಮಾಡ್ತಿದ್ದು ನಾಳೆ ಎಲ್ಲಾ ಪ್ರಮುಖ ನಾಯಕರ ಜೊತೆ ಸಭೆ ನಡೆಯಲಿದೆ. ಬಂಡಾಯದ ಬಾವುಟ ಹಾರಿಸಿರೋ ಯತ್ನಾಳ್ , ಜಾರಕಿಹೊಳಿ ಸೇರಿ ಹಲವು ಪ್ರಮುಖರು ಸಭೆಯಲ್ಲಿ ಭಾಗಿಯಾಗ್ತಿದ್ದು RSS- BJP ಸಮನ್ವಯ ಬೈಟೆಕ್ ಭಾರೀ ಕುತೂಹಲ ಕೆರಳಿಸುತ್ತಿದೆ.
2023 ರ ವಿಧಾನಸಭೆಯ ಹೀನಾಯ ಸೋಲು ರಾಜ್ಯ ಬಿಜೆಪಿಯನ್ನು ಒಡೆದುಹಾಕಿತು, ಪಕ್ಷ ಒಡೆದು ಮೂರು ಬಾಗಿಲಾಗಿದೆ ಒಬ್ಬೊಬ್ಬ ನಾಯಕ ಒಂದೊಂದು ದಾರಿ ಹುಡುಕಿಕೊಂಡಿದ್ದಾರೆ. ಅದರಲ್ಲೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷರಾದ್ಮೇಲಂತು ಪಕ್ಷದೊಳಗಿನ ಆಂತರಿಕ ಭಿನ್ನಮತ ಬಹಿರಂಗವಾಗಿಯೇ ಸ್ಪೋಟಗೊಂಡಿದೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಸೇರಿ ಹಲವು ನಾಯಕರು ಕುಟುಂಬ ರಾಜಕಾರಣದ ವಿರುದ್ಧ ತಿರುಗಿಬಿದ್ದು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಕೇಸರಿ ಹೈಕಮಾಂಡ್ ತನ್ನ ಮಾತೃ ಸಂಸ್ಥೆ RSS ನಿಂದ ನಾಳೆ ಸಮನ್ವಯ ಸಭೆ ನಡೆಸಲು ಮುಂದಾಗಿದೆ..
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿಯ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನ್ದಾಸ್ ಅಗರವಾಲ್, , ಅರವಿಂದ ಲಿಂಬಾವಳಿ ಸೇರಿದಂತೆ ಒಟ್ಟು 40 ಪ್ರಮುಖ ನಾಯಕರನ್ನು ನಾಳಿನ ಆಹ್ವಾನಿಸಲಾಗಿದೆ. ಮಾಗಡಿ ರಸ್ತೆಯ ಚೆನ್ನೇನಹಳ್ಳಿಯಲ್ಲಿರುವ RSS ಕಚೇರಿಯಲ್ಲಿ ಸಭೆ ನಡೆಯಲಿದ್ದು, ಇತ್ತೀಚೆಗೆ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ, ಪಕ್ಷ ಸಂಘಟನೆ, ಸರ್ಕಾರದ ವಿರುದ್ಧ ಹೋರಾಟ, ಸದಸ್ಯತ್ವ ನೋಂದಣಿ, ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.