ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ: ದರ್ಗಾ ಮುಂದೆ ಮೆರವಣಿಗೆ ಮಾಡದಂತೆ ಪುಂಡರ ಕ್ಯಾತೆ – 144 ಸೆಕ್ಷನ್ ಜಾರಿ

Share to all

ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ ಆಗಿರೋ ಘಟನೆ ನಾಗಮಂಗಲದಲ್ಲಿ ನಡೆದಿದೆ. ಹಾಗಾಗಿ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಘುಲಾಠಿ ಪ್ರಹಾರ ಮಾಡಿದ್ದಾರೆ. ಹೌದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಬುಧವಾರ ರಾತ್ರಿ ಸಂಭವಿಸಿದ ಕೋಮು ಗಲಭೆ ಬಿಗಡಾಯಿಸಿದೆ. ಕಿಡಿಗೇಡಿಗಳು ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ನಡುರಸ್ತೆಯಲ್ಲೇ ತಲ್ವಾರ್, ಲಾಂಗು, ರಾಡ್‌ಗಳನ್ನು ಝಳಪಿಸಿದ್ದಾರೆ. ಪೆಟ್ರೋಲ್ ಬಾಂಬ್ ದಾಳಿಗೆ ಅಂಗಡಿಗಳು ಹೊತ್ತಿ ಉರಿದಿವೆ.

ಬದರಿಕೊಪ್ಪಲಿನಿಂದ ಹೊರಟ ಗಣೇಶನ ವಿಸರ್ಜನಾ ಮೆರವಣಿಗೆ ಮಂಡ್ಯ ಸರ್ಕಲ್ ಮಾರ್ಗವಾಗಿ ತೆರಳಿತ್ತು. ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯತ್ತ ಮೆರವಣಿಗೆ ಹೊರಟಿತ್ತು. ಆದರೆ ನಾಗಮಂಗಲದ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆಗೆ ತಡೆಯೊಡ್ದಿದ್ದಾರೆ. ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗಿದ್ದಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.

ಅನ್ಯಕೋಮಿನ ಯುವಕರ ಕ್ಯಾತೆಗೆ ಕೇರ್ ಮಾಡದ ಗಣೇಶನ ವಿಸರ್ಜನಾ ತಂಡ, ಮೈಸೂರು ರಸ್ತೆಯಲ್ಲಿರುವ ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯಲ್ಲಿ ಮೆರವಣಿಗೆ ಹೊರಟಿದೆ. ಡಿಜೆ ಸೌಂಡ್ ಜತೆ ಡೊಳ್ಳು, ತಮಟೆ ಸದ್ದಿನೊಂದಿಗೆ ಪಟಾಕಿ ಸಿಡಿಸುತ್ತಾ ಸಂಭ್ರಮದಿಂದ ಹೆಜ್ಜೆ ಹಾಕಿದೆ. ಇನ್ನೇನು ಮಸೀದಿಯಿಂದ ಸ್ವಲ್ಪ ದೂರ ಇದೆ ಎನ್ನುವಾಗ ಅನ್ಯಕೋಮಿನ ಯುವಕರು ಏಕಾಏಕಿ ಗಣೇಶ ವಿಸರ್ಜನಾ ಮೆರವಣಿಗೆಯತ್ತ ಕಲ್ಲು ತೂರಾಟ ನಡೆಸಿದ್ದಾರೆ. ಕಟ್ಟಡದ ಮೇಲೆ ನಿಂತುಕೊಂಡು ಸಹ ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ.

ಯಾವಾಗ ಮೆರವಣಿಗೆಯತ್ತ ಅನ್ಯಕೋಮಿನವರು ಕಲ್ಲು ತೂರಾಟ ನಡೆಸಲು ಶುರುಮಾಡಿದರೋ, ಆಗ ಗಲಾಟೆ ಶುರುವಾಗಿದೆ. ಹಿಂದೂಗಳು ಮತ್ತು ಅನ್ಯಕೋಮಿನ ಯುವಕರ ನಡುವೆ ವಾಕ್ಸಮರ, ತಳ್ಳಾಟ ನೂಕಾಟ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ನಂತರ ಕಲ್ಲುತೂರಾಟ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಹಿಂದೂಗಳು ನಾಗಮಂಗಲ ಪೊಲೀಸ್ ಠಾಣೆ ಮುಂದೆಯೇ ಗಣೇಶನ ವಿಗ್ರಹವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ನಾಗಮಂಗಲ ಪೊಲೀಸ್ ಠಾಣೆ ಮುಂದೆ ಹಿಂದೂಗಳು ಪ್ರತಿಭಟನೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ, ಇದಾದ ಸ್ವಲ್ಪಹೊತ್ತಿನಲ್ಲೇ, ಅಂದರೆ ರಾತ್ರಿ 10 ಗಂಟೆ ಸುಮಾರಿಗೆ ನಾಗಮಂಗಲದ ಮಂಡ್ಯ ಸರ್ಕಲ್‌ನಲ್ಲಿ ದುಷ್ಕೃತ್ಯವೇ ನಡೆದುಹೋಗಿದೆ. ಅನ್ಯಕೋಮಿನ ಯುವಕರ ಗುಂಪು ಸಿಕ್ಕಸಿಕ್ಕ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಪೆಟ್ರೋಲ್ ಬಾಂಬ್‌ಗಳನ್ನು ತೂರಿದೆ. ಗುಜರಿ ಅಂಗಡಿಯೊಂದು ಧಗಧಗಿಸಿ ಉರಿಯಿತು. ಬೈಕ್ ಶೋರೂಂ ಒಂದನ್ನು ಧ್ವಂಸಗೊಳಿಸಲಾಯಿತು. ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದು ಹೊತ್ತಿ ಉರಿದವು.

ಬೆಂಕಿ ಹಚ್ಚಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಮಂಡ್ಯ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಸ್ಥಿತಿ ಹತೋಟಿಯಲ್ಲಿದ್ದು ಸೆಪ್ಟೆಂಬರ್​ 14ರವರೆಗೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಹೇರಲಾಗಿದೆ.

 


Share to all

You May Also Like

More From Author