ಕೋಲ್ಕತಾ:- ಸಿಎಂ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ಕೊಡುವ ವಿಚಾರವಾಗಿ ಮಾತನಾಡಿದ್ದು, ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ಕಿರಿಯ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ಭಾವನಾತ್ಮಕ ಭಾಷಣ ಮಾಡಿದರು. ರಾಜ್ಯದ ಉನ್ನತ ಹುದ್ದೆಗೆ ನಾನು ಆಕರ್ಷಿತಳಾಗಿಲ್ಲ. ಜನರ ಹಿತಕ್ಕಾಗಿ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.
ವೈದ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮಾತುಕತೆಗೆ ಸರ್ಕಾರ ಯಾವಾಗಲೂ ಸಿದ್ಧವಾಗಿದೆ ಎಂದು ವೈದ್ಯರಿಗೆ ಭರವಸೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧದ ಸಂದೇಶಗಳು ಹರಿದಾಡುತ್ತಿರುವುದನ್ನು ಖಂಡಿಸಿದ ಸಿಎಂ, ನಮ್ಮ ಸರ್ಕಾರವನ್ನು ಅವಮಾನಿಸಲಾಗಿದೆ. ಇದರಲ್ಲಿ ರಾಜಕೀಯ ಬಣ್ಣವಿದೆ ಎಂಬುದು ಜನಸಾಮಾನ್ಯರಿಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದಿರುವ ವ್ಯಕ್ತಿಗಳಿಗೆ ಯಾವುದೇ ನ್ಯಾಯ ಬೇಕಿಲ್ಲ. ಅವರಿಗೆ ಕುರ್ಚಿ ಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ
ಜನರ ಹಿತದೃಷ್ಟಿಯಿಂದ ನಾನು ಕೆಳಗಿಳಿಯಲು ಸಿದ್ಧಳಿದ್ದೇನೆ. ನನಗೆ ಮುಖ್ಯಮಂತ್ರಿ ಹುದ್ದೆ ಬೇಡ. ತಿಲೋತ್ತಮ್ಮ ಅವರಿಗೆ ನ್ಯಾಯ ಬೇಕು. ಸಾಮಾನ್ಯ ಜನರು ವೈದ್ಯಕೀಯ ಚಿಕಿತ್ಸೆ ಪಡೆಯಬೇಕೆಂದು ನಾನು ಬಯಸುತ್ತೇನೆ ಎಂದು ಬ್ಯಾನರ್ಜಿ ಹೇಳಿದ್ದಾರೆ.