HSRP Number Plate: HSRP ನಂಬರ್‌ ಪ್ಲೇಟ್‌ ಬೇಗ ಹಾಕಿಸಿ, ದಂಡ ತಪ್ಪಿಸಿ! 1 ದಿನ ಮಾತ್ರ ಬಾಕಿ

Share to all

ಬೆಂಗಳೂರು: ಮೂರು ಬಾರಿಯ ಗಡುವು ವಿಸ್ತರಣೆಯ ನಂತರ ಕೊನೆಗೂ ಇದೀಗ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ಕೊನೆಯ ಡೆಡ್​​ಲೈನ್ ನಾಳೆ ಕೊನೆಗೊಳ್ಳಲಿದೆ. ಆದಾಗ್ಯೂ, ಸೆಪ್ಟೆಂಬರ್ 18 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಬರಲಿದೆ.

ಹೀಗಾಗಿ ಅಲ್ಲಿಯವರೆಗೆ ವಾಹನ ಮಾಲೀಕರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಕರ್ನಾಟಕ ಸಾರಿಗೆ ಆಯುಕ್ತ ಯೋಗೇಶ್ ತಿಳಿಸಿರುವುದಾಗಿ ವರದಿ ಮಾಡಿದೆ. ಗಡುವನ್ನು ಮತ್ತೊಮ್ಮೆ ವಿಸ್ತರಿಸುವ ಅಥವಾ ವಾಹನ ಚಾಲಕರಿಗೆ ದಂಡ ವಿಧಿಸುವ ನಿರ್ಧಾರವನ್ನು ಸೆಪ್ಟೆಂಬರ್ 18ರ ನಂತರವೇ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಒಟ್ಟಿನಲ್ಲಿ, ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವು ವಿಸ್ತರಣೆ ಬಗ್ಗೆ ಸೆಪ್ಟೆಂಬರ್ 18 ಹೈಕೋರ್ಟ್ ವಿಚಾರಣೆಯ ನಂತರವೇ ಕರ್ನಾಟಕ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಸಾರಿಗೆ ಇಲಾಖೆ ಅಂಕಿಅಂಶ ಪ್ರಕಾರ, ರಾಜ್ಯದಲ್ಲಿರುವ ಹಳೆಯ ಎರಡು ಕೋಟಿ ವಾಹನಗಳ ಪೈಕಿ ಶೇ 26ರಷ್ಟು ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ವಾಹನ ಮಾಲೀಕರ ನೀರಸ ಪ್ರತಿಕ್ರಿಯೆಯಿಂದಾಗಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವನ್ನು ಈ ಹಿಂದೆ ಹಲವಾರು ಬಾರಿ ವಿಸ್ತರಿಸಲಾಗಿತ್ತು.

ಎಚ್‌ಎಸ್‌ಆರ್‌ಪಿ ಅಳವಡಿಸದವರಿಗೆ ದಂಡ ಎಷ್ಟು?

ಗಡುವು ಮುಕ್ತಾಯದ ನಂತರವೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುವ ವಾಹನ ಮಾಲೀಕರು 500 ರೂ. ದಂಡ ಪಾವತಿಸಬೇಕಾಗುತ್ತದೆ. ಸೆಪ್ಟೆಂಬರ್ 16 ರಿಂದ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಲಿದ್ದಾರೆ. ಕರ್ನಾಟಕದಾದ್ಯಂತ, ವಿಶೇಷವಾಗಿ ಹೆಚ್ಚಿನ ಪ್ರಮಾಣದ ವಾಹನಗಳಿರುವ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಯಲಿದೆ ಎಂದು ಎಂದು ಹೆಚ್ಚುವರಿ ಸಾರಿಗೆ ಆಯುಕ್ತ (ಜಾರಿ ದಕ್ಷಿಣ) ಮಲ್ಲಿಕಾರ್ಜುನ ಸಿ ಇತ್ತೀಚೆಗಷ್ಟೇ ಹೇಳಿದ್ದರು. ಆದಾಗ್ಯೂ, ಸೆಪ್ಟೆಂಬರ್ 18ರ ವರೆಗೆ ವಾಹನ ಮಾಲೀಕರು ತುಸು ನಿರಾಳವಾಗಿರಬಹುದಾಗಿದೆ.

ಸಾರಿಗೆ ಇಲಾಖೆಯು 2019ರ ಏಪ್ರಿಲ್ 1 ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು 2023ರ ಆಗಸ್ಟ್​​ನಲ್ಲಿ ಹೊರಡಿಸಿತ್ತು. ಆರಂಭದಲ್ಲಿ 2023 ರ ನವೆಂಬರ್ 17 ರ ಗಡುವನ್ನು ನಿಗದಿಪಡಿಸಲಾಗಿತ್ತು. ಆದಾಗ್ಯೂ, ನಿಧಾನಗತಿಯ ಅಳವಡಿಕೆಯ ಕಾರಣ ಗಡುವನ್ನು ಮೂರು ಬಾರಿ ವಿಸ್ತರಿಸಲಾಗಿತ್ತು.

 


Share to all

You May Also Like

More From Author