ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ‘ಪಂಚ ಗ್ಯಾರಂಟಿ’ ಯೋಜನೆಗಳಲ್ಲಿ “ಗೃಹ ಲಕ್ಷ್ಮಿ” ಯೋಜನೆಯೂ ಒಂದು. ಎರಡ್ಮೂರು ತಿಂಗಳಿಂದ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಪಾವತಿಯಾಗಿಲ್ಲ. ಏಕೆ ತಡವಾಗುತ್ತಿರಬಹುದು ಎಂಬ ಕುರಿತು ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಇದರ ಬೆನ್ನಲ್ಲೇ 2 ತಿಂಗಳ ಬಾಕಿ ಹಣವನ್ನು ಶೀಘ್ರ ಒಮ್ಮೆಗೆ ಖಾತೆ ಜಮೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ” ನಾನು ಈಗಾಗಲೇ ಹಲವು ಬಾರಿ ಗೃಹಲಕ್ಷ್ಮಿ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಮತ್ತೊಮ್ಮೆ ಸ್ಪಷ್ಟನೆ ಕೊಡುತ್ತಿದ್ದೇನೆ. ಗೃಹಲಕ್ಷ್ಮಿ ಹಣ ನಿತ್ಯ, ಸತ್ಯ, ನಿರಂತರ. ಕಳೆರಡು ತಿಂಗಳಿಂದ ಬರದಿರುವ ಹಣ ಒಂದೇ ಬಾರಿ ಅಕೌಂಟ್ಗೆ ಪಾವತಿಯಾಗಲಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಮೂರು ತಿಂಗಳ ಹಿಂದಷ್ಟೆ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಅವರಿಗೂ ಕೂಡ ಅಷ್ಟು ಬಾಕಿ ಹಣ ಒಟ್ಟಿಗೆ ಜಮಾ ಆಗಲಿದೆ ” ಎಂದು ಸ್ಪಷ್ಟಪಡಿಸಿದರು.
ಚಿತ್ರರಂಗದ ಕಲಾವಿದೆಯರ ಜೊತೆ ಮಹಿಳಾ ಆಯೋಗ ಸಭೆ ಆಯೋಜಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಖಂಡಿತಾ ಸಮಿತಿ ರಚನೆ ಆಗಬೇಕು. ನಾನು ಕೂಡ ಸಮಿತಿ ರಚನೆ ಆಗಲಿ ಅಂತ ಹೇಳುತ್ತೇನೆ. ಮುಖ್ಯಮಂತ್ರಿಗಳು ಈಗಾಗಲೇ ಮಾಹಿತಿ ಪಡೆದಿದ್ದಾರೆ. ಚಿತ್ರರಂಗ ಅಷ್ಟೇ ಅಲ್ಲ, ಯಾವ ಕ್ಷೇತ್ರದಲ್ಲೂ ಮಹಿಳೆಯರಿಗೆ ದೌರ್ಜನ್ಯ ಆಗಬಾರದು. ಈ ಬಗ್ಗೆ ನನ್ನ ಬಳಿ ಯಾವ ನಟಿಯರೂ ಬಂದು ಮಾತನಾಡಿಲ್ಲ ಎಂದು ಸಚಿವರು ಹೇಳಿದರು.