ಬೆಂಗಳೂರು: ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರ ಬಂಧನ ಆಗಿದೆ. ಆಂಧ್ರದ ಚಿತ್ತೂರಿಗೆ ಹೊರಟಿದ್ದ ಮಾಜಿ ಸಚಿವ ಮುನಿರತ್ನರನ್ನ ಮುಳಬಾಗಿಲು ತಾಲೂಕಿನ ಹೊರವಲಯದ ನಂಗಲಿ ಬಳಿ ಬಂಧನ ಮಾಡಲಾಗಿದೆ. ಶಾಸಕ ಮುನಿರತ್ನ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರ್ನಳ್ಳಿ ವಾದ ಮಂಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮುನಿರತ್ನಗೆ ನ್ಯಾಯಾಂಗ ಬಂಧನ ವಿಧಿಸಿದೆ. ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ನಾಳೆಗೆ ಶಾಸಕರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಆಗಿರುವ ಹಿನ್ನೆಲೆಯಲ್ಲಿ ಮುನಿರತ್ನ ಅವರನ್ನು ಸದ್ಯ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.
ಲಂಚ ಹಾಗೂ ಜಾತಿ ನಿಂದನೆ ಆರೋಪದ ಅಡಿ ದಾಖಲಾಗಿದ್ದ ಪ್ರಕರಣ ಸಂಬಂಧ ಮುನಿರತ್ನ ಅವರನ್ನು, ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿ ಎಂಬಲ್ಲಿ ವೈಯ್ಯಾಲಿಕಾವಲ್ ಪೊಲೀಸರು ಶನಿವಾರ ವಶಕ್ಕೆ ಪಡೆದು, ಬಂಧಿಸಿದ್ದರು. ಬಂಧನಕ್ಕೊಳಗಾಗಿದ್ದ ಮುನಿರತ್ನರನ್ನು ಎರಡು ದಿನ ಪೊಲೀಸರ ವಶಕ್ಕೆ ನೀಡಿ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ಭಾನುವಾರ ಆದೇಶಿಸಿತ್ತು.