ಬೆಂಗಳೂರು: ಯುವತಿಯೊಬ್ಬಳು ಪ್ರೀತಿ ಮಾಡುವುದಾಗಿ ಕರೆಸಿ ವ್ಯಕ್ತಿಗೆ ಸ್ನೇಹಿತನ ಕೈಯಿಂದ ಚಾಕು ಹಾಕಿಸಿದ ಘಟನೆ ಬೆಂಗಳೂರಿನ ಸದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಟ್ಟೆ ಅಂಗಡಿ ವ್ಯಾಪಾರಿ ಹಿತೇಂದ್ರ ಕುಮಾರ್(59) ಎಂಬಾತನ ಮೇಲೆ ಕೊಲೆ ಯತ್ನ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಟ್ಟೆ ಅಂಗಡಿ ವ್ಯಾಪಾರಿ 59 ವರ್ಷದ ಹಿತೇಂದ್ರ ಕುಮಾರ್ ಎಂಬಾತನ ಮೇಲೆ ಕೊಲೆ ಯತ್ನ ನಡೆದಿದೆ. ಜಯನಗರದಲ್ಲಿ ಬಟ್ಟೆ ಅಂಗಡಿ ನಡೆಸ್ತಿರೋ ಗಾಯಾಳು ಹಿತೇಂದ್ರ ಕುಮಾರ್ ಅವರ ಬಟ್ಟೆ ಅಂಗಡಿಗೆ ಜೂನ್ ತಿಂಗಳಲ್ಲಿ ಕೆಲಸಕ್ಕೆಂದು ಓರ್ವ ಯುವತಿ ಸೇರಿಕೊಂಡಿದ್ದಳು. ಎರಡು ಮೂರು ತಿಂಗಳು ಕೆಲಸ ಮಾಡಿ ನಂತರ ಕೆಲಸ ಬಿಟ್ಟಿದ್ದಳು. ಕಳೆದ ಸೆ. 14ರಂದು ಭೇಟಿಯಾಗೋಣಾ ಎಂದು ಯುವತಿ ಫೋನ್ ಮಾಡಿ ಹಿತೇಂದ್ರ ಅವರನ್ನು ಕರೆಸಿಕೊಂಡಿದ್ದಳು. ಬಿಟಿಎಂ ಲೇಔಟ್ ನ ಪಾರ್ಕ್ ವೊಂದರಲ್ಲಿ ಯುವತಿಯನ್ನ ಭೇಟಿಯಾಗಲು ಹಿತೇಂದ್ರ ಅವರು ತೆರಳಿದ್ದಳು.
ಈ ವೇಳೆ ಹಿತೇಂದ್ರ ಕುಮಾರ್ ತನ್ನ ಪಾರ್ಕ್ನ ಬೆಂಚ್ ಮೇಲೆ ಕೂತು ಪ್ರೀತಿಯ ನಿವೇದನೆಯನ್ನು ಯುವತಿ ಬಳಿ ಹೇಳಿಕೊಂಡಿದ್ದ. ಯುವತಿ ಕೂಡ ಈ ಪ್ರೀತಿಗೆ ಒಕೆ ಅಂತಾ ಹೇಳಿದ್ದಳು. ಇದೇ ಖುಷಿಯಲ್ಲಿ ಮಾರನೇ ದಿನ ಮತ್ತೆ ಭೇಟಿ ಮಾಡಲು ಹಿತೇಂದ್ರ ಯುವತಿಯನ್ನು ಕರೆದಿದ್ದ. ಅದೇ ಪಾರ್ಕ್ ನಲ್ಲಿ, ಅದೇ ಬೆಂಚ್ ಮೇಲೆ ಕೂತು ಇಬ್ಬರೂ ಮಾತನಾಡಿದ್ದರು. ಈ ವೇಳೆ ಯುವತಿ ಸ್ನೇಹಿತ ಸಿದ್ದು ಚಾಕು ಸಮೇತ ಏಕಾಏಕಿ ಎಂಟ್ರಿ ಕೊಟ್ಟಿದ್ದ. ಯುವತಿ ಹಾಗೂ ಹಿತೇಂದ್ರ ಮಾತನಾಡುತ್ತ ಕೂತಿದ್ದನ್ನು ಕಂಡ ಸಿದ್ದು ಜಗಳ ಶುರು ಮಾಡಿದ್ದ.
ಈ ವೇಳೆ ಮೂವರ ಮಧ್ಯೆ ಜಗಳವಾಗಿ ಕೊನೆಗೆ ಸಿದ್ದು ಹಿತೇಂದ್ರಗೆ ಚಾಕು ಇರಿದಿದ್ದಾನೆ.ಹಿತೇಂದ್ರ ಕುಮಾರ್ ಹೊಟ್ಟೆ, ಬೆನ್ನು ಸೇರಿ ಕೆಲವೆಡೆ ಇರಿಯಲಾಗಿದೆ. ಘಟನೆ ಸಂಬಂಧ ತಾನು ಪ್ರೀತಿಸ್ತಿದ್ದ ಯುವತಿ ಹಾಗೂ ಆಕೆಯ ಸ್ನೇಹಿತ ಸಿದ್ದು ವಿರುದ್ಧ ಗಾಯಾಳು ಹಿತೇಂದ್ರ ಅವರು ದೂರು ದಾಖಲಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ಕೊಲೆ ಯತ್ನ ಮಾಡಿದ್ದಾರೆ ಎಂದು ಸದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.