ಬೆಂಗಳೂರು: ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿನಿಂದನೆ ಮಾಡಿರುವ ಕೇಸ್ನಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೀಗ ಬಿಜೆಪಿ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮುನಿರತ್ನ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಗೆ ಮತ್ತೊಂದು ದೂರು ದಾಖಲಾಗಿದೆ. ಮಹಿಳೆಯೊಬ್ಬರು ಖುದ್ದು ಠಾಣೆಗೆ ಬಂದು ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ.
ಖಾಸಗಿ ರೆಸಾರ್ಟ್ ನಲ್ಲಿ ನನ್ನ ವಿರುದ್ಧ ಅತ್ಯಾಚಾರವಾಗಿದೆ ಎಂದು ಏಳು ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಅದರಲ್ಲಿ ಶಾಸಕ ಮುನಿರತ್ನ A1 ಆರೋಪಿಯಾಗಿದ್ದಾರೆ. ಇನ್ನು ವಿಜಯ್ ಕುಮಾರ್, ಸುಧಾಕರ್, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ್ ಹಾಗೂ ಲೋಕಿ ಎಂಬುವರ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ. ಖಾಸಗಿ ರೆಸಾರ್ಟ್ನಲ್ಲಿ ಅತ್ಯಾಚಾರ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು DySP ದಿನಕರ್ ಶೆಟ್ಟಿ ಸಮ್ಮುಖದಲ್ಲಿ ಮಹಿಳೆ ಆರೋಪ ಮಾಡಿ ಹೇಳಿಕೆ ನೀಡಿದ್ದಾರೆ. 354 a, 354 c, 376(2), 308, 406, 384, 120b 504, 506, 149 IPC ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.