ಚಿಕ್ಕಮಗಳೂರು:- ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದ ಬಳಿ ದಟ್ಟ ಮಂಜು ಕವಿದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಕಾರೊಂದು 30 ಅಡಿ ಎತ್ತರದ ಪ್ರದೇಶದಿಂದ ಪಂಚಾಯ್ತಿ ಆವರಣದೊಳಗೆ ಬಿದ್ದಿರುವ ಘಟನೆ ಜರುಗಿದೆ.
ಬೆಂಗಳೂರಿನಿಂದ ಹೊರನಾಡಿಗೆ ಹೋಗುತ್ತಿದ್ದ ಪ್ರವಾಸಿ ಕಾರು ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ವೇಗವಾಗಿ ಕಾರು ಚಲಾಯಿಸುತ್ತಿದ್ದದ್ದು ಅಪಘಾತಕ್ಕೆ ಒಂದು ಕಾರಣ ಎಂದು ತಿಳಿದು ಬಂದಿದೆ. 30 ಅಡಿ ಎತ್ತರದ ಪ್ರದೇಶದಿಂದ ಬಿದ್ದ ಕಾರು ಸುಂಕಸಾಲೆ ಗ್ರಾಮ ಪಂಚಾಯ್ತಿಯ ಆವರಣದ ಒಳಕ್ಕೆ ಬಿದ್ದಿದೆ.
ಕಾರಿನಲ್ಲಿ ಐವರು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಕಾರು ಬಿದ್ದ ರಭಸಕ್ಕೆ ಕಾರು ಬಹುತೇಕ ಜಖಂಗೊಂಡಿದೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.