ವಿಜಯಪುರ: ತಿರುಪತಿ ಲಡ್ಡು ವಿವಾದ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಸಿಎಂ ಚಂದ್ರಬಾಬು ನಾಯ್ಡು ಅವರ ಆರೋಪವನ್ನು ತಳ್ಳಿ ಹಾಕಿರುವ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಈ ಕುರಿತು ಮೌನ ಮುರಿದಿದ್ದು, ಇನ್ನೂ ಸನಾತನ ಧರ್ಮ ನಿರ್ಮೂಲನೆಗೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಗನ್ ಮೋಹನ್ ರೆಡ್ಡಿ ಹಿಂದೂ ಅಲ್ಲ, ಮತಾಂತರ ಕ್ರಿಶ್ಚಿಯನ್ ಎಂದರು.
ಕೋಟ್ಯಂತರ ಭಕ್ತರು ತಿರುಪತಿ ಬಾಲಾಜಿಗೆ ನಡೆದುಕೊಳ್ಳುತ್ತಾರೆ. ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬು ಬಳಸುತ್ತಿದ್ದಾರೆ ಎಂಬ ಹೇಳಿಕೆ ರಾಜಕೀಯ ಟೀಕೆ ಅಲ್ಲ. ಗುಜರಾತ್ನಲ್ಲಿ ಪರೀಕ್ಷಿಸಲಾಗಿದ್ದು, ಕೊಬ್ಬು ಬಳಸಿರುವುದು ದೃಢಪಟ್ಟಿದೆ. ಸನಾತನ ಧರ್ಮ ನಿರ್ಮೂಲನೆಗೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ತಿಮ್ಮಪ್ಪನ ಸನ್ನಿಧಿಯಲ್ಲಿ ಘಟನೆ ನಡೆದಿರೋದು ಆಘಾತ ತಂದಿದೆ. ತಪ್ಪು ಮಾಡಿರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಎಂದು ಒತ್ತಾಯಿಸಿದರು.