ಚಾಮರಾಜನಗರ:- ಅದೊಂದು ಕಾರು ಒಂಟಿಯಾಗಿ ನಿಂತಿತ್ತು. ಸಾಕಷ್ಟು ಸಮಯ ನಿಂತಲ್ಲೇ ನಿಂತ ಕಾರು ನೋಡಿ ಅನುಮಾನಗೊಂಡ ಜನರು ಹೋಗಿ ನೋಡಿದಾಗ ಶಾಕ್ ಕಾದಿತ್ತು. ಎಸ್, ಕಾರಿನ ಹಿಂಭಾಗದ ಸೀಟಿನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಜರುಗಿದೆ.
ಕಾರಿನ ಹಿಂಭಾಗದ ಸೀಟ್ ನಲ್ಲಿ ಮಲಗಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನದಿಂದ ಒಂದೇ ಸ್ಥಳದಲ್ಲಿ ನಿಂತಿದ್ದ ಕಾರಿನಿಂದ ವಾಸನೆ ಬರುವುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆ ನಿವಾಸಿ 40 ವರ್ಷದ ರಘು ಮೃತ ವ್ಯಕ್ತಿ ಎಂದು ಪತ್ತೆಯಾಗಿದೆ. ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.