ಮೈಸೂರು:- ವ್ಯಾಪಾರ ಅಂದಮೇಲೆ ಗ್ರಾಹಕರು ಬಾರ್ಗಿಂಗ್ ಮಾಡೋದು ಸಹಜ. ಅದರಂತೆ ಕಡಿಮೆ ಮಾಡೋದು, ಬಿಡೋದು ಮಾಲೀಕರಿಗೆ ಬಿಟ್ಟ ವಿಚಾರ. ಆದ್ರೆ ವ್ಯಾಪಾರದಲ್ಲಿ ಶಾಂತಿ ಕಳೆದುಕೊಂಡ್ರೆ ನಿಜಕ್ಕೂ ವ್ಯಾಪಾರ ಮಾಡೋಕಾಗುತ್ತಾ!? ಇಷ್ಟೆಲ್ಲಾ ಯಾಕೆ ಹೇಳ್ತಿದ್ದೀವಿ ಎನ್ನುವುದನ್ನು ಈ ಸ್ಟೋರಿ ನೋಡಿ ತಿಳಿಯಿರಿ.
ಎಸ್, ಮೈಸೂರು ಜಿಲ್ಲೆಯ ಹುಣಸೂರಿನ ಬೈಪಾಸ್ ರಸ್ತೆ ಬಳಿ ವ್ಯಾಪಾರದಲ್ಲಿ ಚೌಕಾಸಿ ಮಾಡಿದ್ದಕ್ಕೆ ಕಿರಿಕ್ ಆಗಿದ್ದು ಕತ್ತರಿಯಿಂದ ಗ್ರಾಹಕನಿಗೆ ಅಂಗಡಿ ಮಾಲೀಕ ಚುಚ್ಚಿ ಗಾಯಗೊಳಿಸಿರುವ ಘಟನೆ ಜರುಗಿದೆ.
ಘಟನೆ ಸಂಬಂಧ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕುಶಾಲ್ ನಗರದ ಬೈಚನಹಳ್ಳಿ ಗ್ರಾಮದ ನಂದೀಶ್ ಎಂಬುವವರಿಗೆ ಮುರುಗೇಶ್ ಜೋಗಿ ಮಾರ್ಕೆಟಿಂಗ್ನ ಮಾಲೀಕ ಮುರುಗೇಶ್ ಜೋಗಿ ಕತ್ತರಿಯಿಂದ ಚುಚ್ಚಿದ್ದಾರೆ.
ಹಲ್ಲೆಗೊಳಗಾದ ನಂದೀಶ್ ಅವರು ತಮ್ಮ ದೊಡ್ಡಮ್ಮನ ಮಗ ರಮೇಶ್ ಜೊತೆ ವ್ಯಾಪರದ ನಿಮಿತ್ತ ಕುಶಾಲನಗರದಿಂದ ಹುಣಸೂರಿನ ವೀರನಹೊಸಹಳ್ಳಿಗೆ ಗೂಡ್ಸ್ ವಾಹನದಲ್ಲಿ ಬಂದಿದ್ದರು. ಈ ವೇಳೆ ತಮ್ಮ ವಾಹನಕ್ಕೆ ಮ್ಯಾಟ್ ಖರೀದಿಸಲು ಮುರುಗೇಶ್ ರವರ ಅಂಗಡಿಗೆ ಹೋಗಿದ್ದರು. ಆಗ ಮ್ಯಾಟ್ಗೆ 2,300 ರೂ ಬೆಲೆ ಹೇಳಿದಾಗ ನಂದೀಶ್ 2000ಕ್ಕೆ ಕೇಳಿದ್ದಾರೆ. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ.
ನಂತರ ಗೂಡ್ಸ್ ವಾಹನದಿಂದ ಅಲ್ಲಿಂದ ಹೊರಡುತ್ತಿದ್ದಾಗ ಮುರುಗೇಶ್ ಅವರು ಅಂಗಡಿಯಿಂದಲೇ ನಂದೀಶ್ ಮೇಲೆ ಕತ್ತರಿ ಎಸೆದಿದ್ದಾರೆ. ಬಳಿಕ ಬೈಕ್ ನಲ್ಲಿ ಕೆಲವರ ಜೊತೆ ಹಿಂಬಾಲಿಸಿ ಅಡ್ಡಗಟ್ಟಿ ಮತ್ತೆ ಕಿರಿಕ್ ಮಾಡಿದ್ದಾರೆ. ಈ ವೇಳೆ ಸಹಾಯಕ್ಕೆ ಬಂದ ರಮೇಶ್ ಮೇಲೂ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಸದ್ಯ ಗಾಯಗೊಂಡ ನಂದೀಶ್ ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಸಂಬಂಧ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.