ರಣಜಿ ಟ್ರೋಫಿಯ ಮೂಲಕ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ರೆಡ್ ಬಾಲ್ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಹೀಗೆ ಅಭ್ಯಾಸ ನಡೆಸಲು ಮುಖ್ಯ ಕಾರಣ ಮುಂಬರುವ ರಣಜಿ ಟೂರ್ನಿ ಎನ್ನಲಾಗಿದೆ.
ಈ ಹಿಂದೆ ಬರೋಡಾ ಪರ ರಣಜಿ ಟೂರ್ನಿ ಆಡಿದ್ದ ಪಾಂಡ್ಯ ಈ ಬಾರಿ ಕೂಡ ಅದೇ ತಂಡ ಪರ ದೇಶೀಯ ಅಂಗಳದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಮುಂಬರುವ ಬಾರ್ಡರ್ – ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಕದ ತಟ್ಟಲಿದ್ದಾರೆ.
ಇತ್ತ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ಗೆ ಮರಳಿದರೆ, ಬ್ಯಾಟರ್ ಅಥವಾ ಬೌಲರ್ ಒಬ್ಬರು ಸ್ಥಾನ ಕಳೆದುಕೊಳ್ಳುವುದು ಖಚಿತ. ಏಕೆಂದರೆ ಟೀಮ್ ಇಂಡಿಯಾದಲ್ಲಿ ಸ್ಪಿನ್ ಆಲ್ ರೌಂಡರ್ ಗಳಿದ್ದರೂ ವೇಗದ ಬೌಲಿಂಗ್ ಆಲ್ ರೌಂಡರ್ ಇಲ್ಲ. ಹೀಗಾಗಿ ರಣಜಿ ಟೂರ್ನಿಯಲ್ಲಿ ಮಿಂಚಿದರೆ ಪಾಂಡ್ಯಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವುದು ಖಚಿತ ಎಂದೇ ಹೇಳಬಹುದು.
ಅಂದಹಾಗೆ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಪರ 11 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಂದು ಶತಕದೊಂದಿಗೆ 532 ರನ್ ಕಲೆಹಾಕಿದ್ದರು. ಹಾಗೆಯೇ 17 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. 2018 ರಲ್ಲಿ ಕೊನೆಯ ಬಾರಿ ಭಾರತ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದ ಪಾಂಡ್ಯ ಇದೀಗ 6 ವರ್ಷಗಳ ಬಳಿಕ ಮತ್ತೆ ವೈಟ್ ಜೆರ್ಸಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವುದು ವಿಶೇಷ ಎಂದೇ ಹೇಳಬಹುದು.