ಕಾರವಾರ: ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು 11 ಜನ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಅದರಲ್ಲಿ 8 ಜನರನ್ನು ಈಗಾಗಲೇ ಪತ್ತೆ ಮಾಡಿದ್ದು, ಇನ್ನುಳಿದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಮತ್ತು ಜಗನ್ನಾಥ ನಾಯ್ಕ ಎಂಬುವವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಇದೀಗ ಲಾರಿಯೊಳಗೆ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆಯಾಗಿದೆ.
ಗುಡ್ಡಕುಸಿತ ಭೀಕರತೆ ತೋರಿಸುತ್ತಿರುವ ಲಾರಿ ಗುಡ್ಡಕುಸಿತಕ್ಕೆ ಸಿಕ್ಕಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮಣ್ಣಿನ ಒಳಗೆ ಸಿಲುಕಿರುವ ಕೇರಳದ ಅರ್ಜುನ ಚಲಾಯಿಸುತ್ತಿದ್ದ ಭಾರತ ಬೆಂಜ್ ಲಾರಿಯ ಹುಡುಕಾಟ ನಡೆಸಲಾಗಿತ್ತು. ಆದರೆ ಟ್ಯಾಂಕರ್ ಬಿಡಿಭಾಗಗಳು ದೊರಕಿದ್ದವು. ಹಿಂದೆಯೇ ಈ ಟ್ಯಾಂಕರ್‌ನ ಟ್ಯಾಂಕ್ ದೊರೆತಿತ್ತು. ಬಳಿಕ ಅರ್ಜುನ ಚಲಿಸುತ್ತಿದ್ದ ಭಾರತ ಬೆಂಜ್ ಲಾರಿಯಲ್ಲಿ ನಾಟಾ ತುಂಬಿದ್ದು, ಆರಂಭದಲ್ಲಿಯೇ ನಾಟಾದ ಒಂದು ತುಂಡು ದೊರೆತಿತ್ತು. ಹಾಗಾಗಿ ಅರ್ಜುನ ಅವರ ಲಾರಿಯೂ ಅದೇ ಸ್ಥಳದಲ್ಲಿ ಇರಬಹುದೆಂದು ಹೆಚ್ಚಿನ ಕಾರ್ಯಾಚರಣೆ ನಡೆಸಲಾಗಿತ್ತು.
ಶಿರೂರು ಗುಡ್ಡ ಕುಸಿತವಾದ ದಿನದಿಂದ ಇಲ್ಲಿಯವರೆಗೆ ಈಶ್ವರ್ ಮಲ್ಪೆ ಕಾರ್ಯಾಚರಣೆಗೆ ಅನೆಬಲ ತುಂಬಿದ್ದರು. ಸುರಿವ ಮಳೆ, ರಭಸದ ನದಿಯ ಒಳಹರಿವು, ನೀರಿನೊಳಗೆ ಕಣ್ಣು ಬಿಡಲು ಆಗದ ಪರಿಸ್ಥಿತಿಯಲ್ಲೂ ಅವರು ಕಾರ್ಯಾಚರಣೆ ನಡೆಸಿದ್ದರು. ಅದೇ ರೀತಿ ಪ್ರಸ್ತುತ 3ನೇ ಹಂತದ ಕಾರ್ಯಾಚರಣೆಯಲ್ಲೂ ಅವರು ಉತ್ತಮ ಸಹಕಾರ ನೀಡಿದ್ದರು.
ಅರ್ಜುನ್ ನಾಪತ್ತೆಯಾಗಿ ಇಂದಿಗೆ 71 ದಿನಗಳು ಪೂರ್ಣಗೊಂಡಿದೆ. ಡ್ರೆಡ್ಜರ್ ಬಳಸಿ ನಡೆಸಿದ ಶೋಧ ಕಾರ್ಯದಲ್ಲಿ ಲಾರಿಯ ಕ್ಯಾಬಿನ್ ಪತ್ತೆಯಾಗಿದೆ. ಈ ದಿನಗಳಲ್ಲಿ ಅರ್ಜುನ್ ಅವರ ಸಹೋದರಿ ಪತಿ ಜಿತಿನ್ ಸ್ಥಳದಲ್ಲೇ ಇದ್ದರು. ಹೊರತೆಗೆದ ವಾಹನ ಅರ್ಜುನ್ ಅವರದ್ದೇ ಎಂದು ಜಿತಿನ್ ಮತ್ತು ವಾಹನದ ಮಾಲೀಕ ಮನಾಫ್ ದೃಢಪಡಿಸಿದ್ದಾರೆ.