*ಭಾರತ 2026ರ ವೇಳೆಗೆ 100 GW ಸೌರ ಶಕ್ತಿ ಉತ್ಪಾದನೆ ಯೋಜನೆ*
*-ಸೌರ PLI ಯೋಜನೆ ಮೂಲಕ 45000 ಜನಕ್ಕೆ ನೇರ ಉದ್ಯೋಗ*
*- ಅತ್ಯಾಧುನಿಕ ಸೌರ ಶಕ್ತಿ ತಂತ್ರಜ್ಞಾನದಿಂದ 1.1 ಲಕ್ಷ ಕೋಟಿ ಆರ್ಥಿಕ ಉಳಿತಾಯ*
*- ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಪ್ರಕಟಣೆ*
ನವದೆಹಲಿ: ಭಾರತ 2026ರ ವೇಳೆಗೆ 100 GW ಸೌರ ಶಕ್ತಿ ಉತ್ಪಾದನೆಗೆ ಯೋಜನೆ ಹಾಕಿಕೊಂಡಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಎಕನಾಮಿಕ್ ಟೈಮ್ಸ್ ಎನರ್ಜಿ ಲೀಡರ್‌ಶಿಪ್ ಶೃಂಗಸಭೆ 2024 ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯದಲ್ಲಿ ಕ್ಷಿಪ್ರ ಬೆಳವಣಿಗೆ ಕಂಡಿದೆ. ದೇಶೀಯ ಬೇಡಿಕೆ ಪೂರೈಸುವ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು ಕೈಗೊಂಡು ವಿದೇಶಿ ವಿನಿಮಯ ಗಳಿಸುವಲ್ಲಿ ತನ್ನದೇ ಕೊಡುಗೆ ನೀಡುತ್ತದೆ ಎಂದು ಹೇಳಿದ್ದಾರೆ.
*ದಶಕದಲ್ಲಿ ನಿರೀಕ್ಷೆ ಮೀರಿ ಸಾಧನೆ:* 2014ರಲ್ಲಿ ಭಾರತದ ಸ್ಥಾಪಿತ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಕೇವಲ 2.3 GW ಇತ್ತು. ಅದೀಗ ಒಂದು ದಶಕದಲ್ಲಿ ಸರಿಸುಮಾರು 67 GW ಗೆ ಅತ್ಯಧಿಕ ಏರಿಕೆ ಕಂಡು “ಮೇಕ್ ಇನ್ ಇಂಡಿಯಾ” ಆಗುವತ್ತ ದಾಪುಗಾಲಿಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ.
2021ರಲ್ಲಿ ಇದ್ದ 8 GW ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಕಳೆದ 3.5 ವರ್ಷಗಳಲ್ಲಿ ವರ್ಷಕ್ಕೆ 67 GW ಗೆ ಜಿಗಿದಿದೆ. 2026 ರ ವೇಳೆಗೆ ಪ್ರತಿ ವರ್ಷ 100 GW ಗೆ ಕೊಂಡೊಯ್ಯುವ ಯೋಜನೆ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
*45000 ಜನರಿಗೆ ನೇರ ಉದ್ಯೋಗ:* ಸೌರ PLI ಯೋಜನೆ ಭಾರತಕ್ಕೆ ಅತ್ಯಾಧುನಿಕ ಸೌರ ಶಕ್ತಿ ಮಾಡ್ಯೂಲ್ ಉತ್ಪಾದನಾ ತಂತ್ರಜ್ಞಾನ ತರುತ್ತಿದ್ದು, 1.1 ಲಕ್ಷ ಕೋಟಿ ಆರ್ಥಿಕ ಉಳಿತಾಯದ ಜತೆಗೆ ಸುಮಾರು 45,000 ಜನರಿಗೆ ನೇರ ಉದ್ಯೋಗವನ್ನೂ ಸೃಷ್ಟಿಸುತ್ತದೆ. ಅಲ್ಲದೇ, ಆಮದು ಅವಲಂಬನೆ ಕಡಿಮೆ ಮಾಡುತ್ತದೆ ಎಂದಿದ್ದಾರೆ.
*ಹೂಡಿಕೆ ಆಕರ್ಷಣೆ:* ಸೌರ PLI ಯೋಜನೆಯಡಿ 48 GW ಸಂಪೂರ್ಣ ಅಥವಾ ಭಾಗಶಃ ಸಂಯೋಜಿತ ಸೌರ PV ಮಾದರಿ ಉತ್ಪಾದನಾ ಯೋಜನೆಗಳು ಪ್ರಸ್ತುತ ಅನುಷ್ಠಾನದಲ್ಲಿವೆ. ಈ ಯೋಜನೆಗಳು ಲಕ್ಷ ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ಆಕರ್ಷಿಸುತ್ತವೆ ಎಂದಿದ್ದಾರೆ.
*ಸೋಲಾರ್ ಶಕ್ತಿ ಉತ್ಪಾದನೆಗೆ ಉತ್ತೇಜನ*: ಸೌರ ಶಕ್ತಿ ಉತ್ಪಾದನೆ ನಿಟ್ಟಿನಲ್ಲಿ ಸರ್ಕಾರ ಗಮನಾರ್ಹ ಪ್ರಯತನ್ನ ನಡೆಸಿದೆ. ಸೌರ ಶಕ್ತಿ ತಯಾರಿಕೆಯಲ್ಲಿ ಭಾರತ ಆತ್ಮನಿರ್ಭರ್ ಆಗಲಿದೆ. ಇದಕ್ಕಾಗಿ 24000 ಕೋಟಿ ರೂ. ವೆಚ್ಚ ಮಾಡಿದೆ ಎಂದು ಹೇಳಿದ್ದಾರೆ.
ಸೌರ ಶಕ್ತಿಯಲ್ಲಿ “ಮೇಕ್ ಇನ್ ಇಂಡಿಯಾ” ಆಗಿ ವಿಶ್ವ ದರ್ಜೆ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಭಾರತ ಪ್ರೇರಕ ಶಕ್ತಿಯಾಗಿದೆ. ನವೀಕರಿಸಬಹುದಾದ ಇಂಧನ ಉತ್ಪಾದನಾ ವಲಯವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
ಸೌರ ಶಕ್ತಿ ಉತ್ಪಾದನೆ ಮೂಲಕ PLI ನಿಂದ VGF ವರೆಗೆ ದೇಶೀಯ ಕೈಗಾರಿಕೆಗಳಿಗೆ ಅಗತ್ಯ ಬೆಂಬಲ ನೀಡುತ್ತೇವೆ ಎಂದಿರುವ ಸಚಿವರು, ದೇಶೀಯ ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಿಕೆ ಉತ್ತೇಜಿಸಲು ವಿವಿಧ ಕ್ರಮ ಅನುಸರಿಸಲಾಗುತ್ತಿದೆ ಎಂದಿದ್ದಾರೆ.
ಗಾಳಿ ಟರ್ಬೈನ್‌ಗಳ ತಯಾರಿಕೆ, ಹಸಿರು ಹೈಡ್ರೋಜನ್ ಉತ್ಪಾದನೆಗೆ ಎಲೆಕ್ಟ್ರೋಲೈಸರ್‌ಗಳು ಮತ್ತು ಯುಟಿಲಿಟಿ-ಸ್ಕೇಲ್ ಎಲೆಕ್ಟ್ರಿಕ್ ಸ್ಟೋರೇಜ್ ಅಪ್ಲಿಕೇಶನ್‌ಗಳಿಗಾಗಿ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ.
*ಸರ್ಕಾರದ ಪ್ರಯತ್ನ:* ದೇಶೀಯವಾಗಿ ಸೌರ ಶಕ್ತಿ ಉತ್ಪಾದನೆ ಹೆಚ್ಚಿಸುವ ಗುರಿ ಸಾಧನೆಗೆ ಹಣಕಾಸು ಲಭ್ಯತೆ ಮತ್ತು ನೀತಿ ನಿಯಮಗಳ ಸಡಿಲಿಕೆ, ವಿಸ್ತರಣೆ.
ಸೌರ ಶಕ್ತಿ ಮಾಡ್ಯೂಲ್‌ಗಳು ಮತ್ತು ಅಪ್‌ಸ್ಟ್ರೀಮ್ ಘಟಕಗಳಿಗೆ ಸಂಪೂರ್ಣ ಅಥವಾ ಭಾಗಶಃ ಸಂಯೋಜಿತ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು ಆರ್ಥಿಕ ಪ್ರೋತ್ಸಾಹಕಗಳು ಹೀಗೆ ಅನೇಕ ಕ್ರಮಗಳನ್ನು ಒಳಗೊಂಡಿವೆ.