ಬಿಹಾರ:- ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿದ್ದು, ತಕ್ಷಣ ಸಿಪಿಆರ್ ನೀಡುವ ಮೂಲಕ ತನ್ನ ಸಮಯ ಪ್ರಜ್ಞೆಯಿಂದ ಟಿಟಿಇ ಪ್ರಯಾಣಿಕನ ಪ್ರಾಣವನ್ನು ಉಳಿಸಿದ್ದಾರೆ. ಇವರ ಈ ಸಮಯ ಪ್ರಜ್ಞೆ ಮತ್ತು ಮಾನವೀಯ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಘಟನೆ ಬಿಹಾರದ ದರ್ಭಾಂಗಾದಲ್ಲಿ ನಡೆದಿದ್ದು, ರೈಲ್ವೆ ಟಿಟಿಇ ತಮ್ಮ ಸಮಯ ಪ್ರಜ್ಞೆಯಿಂದ ಅಮೂಲ್ಯ ಜೀವವೊಂದನ್ನು ಉಳಿಸಿದ್ದಾರೆ. ಬಿಹಾರದ ದರ್ಭಾಂಗಾದಿಂದ ಉತ್ತರ ಪ್ರದೇಶದ ವಾರಣಾಸಿಗೆ ತೆರಳುತ್ತಿದ್ದ 11062 ಪವನ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಹೃದಯಾಘಾತ ಕಾಣಿಸಿಕೊಂಡಿದ್ದು, ವಿಷಯ ತಿಳಿದು ತಕ್ಷಣ ಆಗಮಿಸಿದ ಟಿಟಿಇ ಸವಿಂದ್ ಕುಮಾರ್ ವೈದ್ಯರಿಗೆ ಕರೆ ಮಾಡಿ ಅವರು ಕೊಟ್ಟ ಸಲಹೆಯಂತೆ ಸಿಪಿಆರ್ ನೀಡಿ ಒಂದು ಅಮೂಲ್ಯ ಜೀವವನ್ನು ಕಾಪಾಡಿದ್ದಾರೆ.
ನಂತರ ರೈಲು ಛಾಪ್ರಾ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಆ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ಕುರಿತ ವಿಡಿಯೋವನ್ನು ರೈಲ್ವೆ ಸಚಿವಾಲಯ ತನ್ನ ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ರೈಲ್ವೆ ಪ್ರಯಾಣಿಕರೊಬ್ಬರಿಗೆ ಜೀವ ದಾನ ನೀಡಿದ ಟಿಟಿಇ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.