ಬೆಂಗಳೂರು:- ಭೋವಿ ನಿಗಮದಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ. ಆರೋಪಿಗಳಿಂದ ಹಣ ಪಡೆದಿದ್ದ ಆರೋಪದಡಿ ತನಿಖಾಧಿಕಾರಿ ಎ.ಡಿ.ನಾಗರಾಜ್ ಅವರನ್ನು ಅಮಾನತು ಮಾಡಿ ಸಿಐಡಿ ಡಿಜಿ ಸಲೀಂ ಅವರು ಆದೇಶ ಹೊರಡಿಸಿದ್ದಾರೆ.
ಭೋವಿ ನಿಗಮದಲ್ಲಿ ಕೋಟ್ಯಂತರ ಹಣ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸರ್ಕಾರ ಸಿಐಡಿ ತನಿಖೆಗೆ ಆದೇಶ ಮಾಡಿತ್ತು. ಈ ವೇಳೆ ಎ.ಡಿ. ನಾಗರಾಜಪ್ಪ ಹಾಗೂ ಲೀಲಾವತಿ ಸೇರಿ ಹಲವರನ್ನು ಬಂಧಿಸಲಾಗಿತ್ತು. ಆರೋಪಿಗಳನ್ನ ಬಂಧಿಸಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ತನಿಖೆ ವೇಳೆ ತನಿಖಾಧಿಕಾರಿ
ನಾಗರಾಜಪ್ಪ ಅವರು ಆರೋಪಿಗಳಿಂದ ಹಣ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಭ್ರಷ್ಟಾಚಾರ ಹಿನ್ನೆಲೆ ತನಿಖಾಧಿಕಾರಿಯಾಗಿದ್ದ ಎ.ಡಿ.ನಾಗರಾಜ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.ಇನ್ನೂ 2021-22ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದ್ದು, ಲಕ್ಷಾಂತರ ರೂ. ಸಾಲಕೊಡಿಸುವುದಾಗಿ ಸಾರ್ವಜನಿಕ ದಾಖಲೆ ದುರ್ಬಳಕೆ ಜೊತೆಗೆ 10 ಕೋಟಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ.