ಮುಂಬೈ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿ ಮುಖಕ್ಕೆ ಪತಿ ಆ್ಯಸಿಡ್ ಎರಚಿದ ಘಟನೆ ಮುಂಬೈನಲ್ಲಿ ಜರುಗಿದೆ. 27 ವರ್ಷದ ಮಹಿಳೆ ಮಲಾಡ್ನಲ್ಲಿರುವ ತನ್ನ ತಾಯಿಯ ನಿವಾಸದಲ್ಲಿದ್ದಾಗ ಆರೋಪಿ ಬುಧವಾರ ಬೆಳಗ್ಗೆ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ. ಆಕೆಗೆ ಸುಟ್ಟಗಾಯಗಳು ಮತ್ತು ಮುಖದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತನ್ನ ಪತಿಗೆ ಬೇರೊಂದು ಮಹಿಳೆ ಜತೆಗೆ ಅಕ್ರಮ ಸಂಬಂಧವಿರುವ ಕುರಿತು ತಿಳಿದು ಆಘಾತಕ್ಕೊಳಗಾಗಿ ವಿಚ್ಛೇದನ ಕೇಳಿದ್ದಕ್ಕೆ ಪಾಪಿ ಗಂಡ ಈ ಕೃತ್ಯ ಎಸಗಿದ್ದಾನೆ. 2019ರಲ್ಲಿ ಪ್ರೇಮವಿವಾಹ ಮಾಡಿಕೊಂಡಿದ್ದ ಮಹಿಳೆ, ಗಂಡನ ಅನೈತಿಕ ಸಂಬಂಧದ ವಿಚಾರ ತಿಳಿದು ಕಳೆದ ಮೂರು ತಿಂಗಳಿಂದ ತಾಯಿಯೊಂದಿಗೆ ವಾಸವಾಗಿದ್ದಳು. ಆತ ನಿರುದ್ಯೋಗಿಯಾಗಿದ್ದು ಜತೆಗೆ ಮಾದಕವ್ಯಸನಿಯೂ ಆಗಿದ್ದಾನೆ. ಪೊಲೀಸರು ಆಕೆಯ ಪತಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 124 (2), 311 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.