ಮುಡಾ ಆರೋಪ: ಮನೆ-ಆಸ್ತಿ-ಚಿನ್ನ-ಸಂಪತ್ತ ಬಯಸಿದವಳಲ್ಲ- ಸಿಎಂ ಪತ್ನಿ ಪಾರ್ವತಿ ಭಾವನಾತ್ಮಕ ಪೋಸ್ಟ್

Share to all

ಬೆಂಗಳೂರು: ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಇ.ಡಿ ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ’ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು 14 ಸೈಟ್​ಗಳ ಕ್ರಯ ಪತ್ರ ಹಿಂದಿರುಗಿಸುವುದಾಗಿ ಮುಡಾಗೆ ಪತ್ರ ಬರೆದಿದ್ದಾರೆ.

ಮೈಸೂರಿನ ವಿಜಯನಗರದ 3 ಮತ್ತು 4ನೇ ಹಂತದಲ್ಲಿ ಪಡೆದ 14 ನಿವೇಶನಗಳನ್ನು ಹಿಂದಿರುಗಿಸುವುದಾಗಿ ಸಿಎಂ ಪತ್ನಿ ಪಾರ್ವತಿ ಅವರು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯನವರಿಗೆ ರಾಜಜಕೀಯವಾಗಿ ಆಗುತ್ತಿರುವ ಸಂಕಷ್ಟವನ್ನು ನೋಡಲಾಗದೇ ಪತ್ನಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಈ ಬಗ್ಗೆ ಖುದ್ದು ಮುಡಾಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಈ ಮೂಲಕ ಈ ಮುಡಾ ಹಗರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಆದ್ರೆ, ಗಮನಿಸಿದ ಬೇಕಾದ ಅಂಶ ಅಂದ್ರೆ, ಸಾರ್ವತಿ ಅವರು ಬರೆದ ಪತ್ರದಲ್ಲಿ ದಿನಾಂಕ ಇಲ್ಲದಿರುವುದು ನಾನಾ ಚರ್ಚೆಗೆ ಗ್ರಾಸವಾಗಿದೆ.

ಇದರ ಬೆನ್ನಲ್ಲೇ, ಭಾವನಾತ್ಮಕ ಪತ್ರವನ್ನು ಬರೆದಿರುವ ಪಾರ್ವತಿಯವರು, ನಾನೆಂದೂ, ಮನೆ, ಚಿನ್ನ, ಆಸ್ತಿ, ಸಂಪತ್ತನ್ನು ಬಯಸಿದವಳಲ್. ನನ್ನ ಪತಿಯ ಗೌರವ, ನೆಮ್ಮದಿಯ ಮುಂದೆ ನನಗೆ ನಿವೇಶನಗಳೂ ಲೆಕ್ಕಕ್ಕಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ. ನನ್ನ ಪತಿಯಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದೆಂದು ನಿರ್ಧಾರಕ್ಕೆ ಬದ್ದಳಾಗಿ ಬದುಕಿದವಳು.

ನಾನೆಂದೂ, ಮನೆ, ಚಿನ್ನ, ಆಸ್ತಿ, ಸಂಪತ್ತನ್ನು ಬಯಸಿದವಳಲ್ಲ. ಯಾವುದೇ ಕಾರಣಕ್ಕೂ ನನ್ನಿಂದ ಅವರ ರಾಜಕೀಯ ಜೀವನಕ್ಕೆ ಒಂದು ಸಣ್ಣ ಹನಿಯಷ್ಟೂ ಕಳಂಕ ತಟ್ಟಬಾರದೆಂದು ಎಚ್ಚರಿಕೆಯಿಂದ ನಡೆದುಕೊಂಡವಳು. ನನ್ನ ಪತಿಗೆ ರಾಜ್ಯದ ಜನತೆ ಹರಸುತ್ತಾ ಬಂದ ಪ್ರೀತಿ ಅಭಿಮಾನಗಳನ್ನು ದೂರದಿಂದಲೇ ನೋಡಿ ಸಂತೋಷ ಮತ್ತು ಹೆಮ್ಮೆ ಪಟ್ಟವಳು.

ಹೀಗಿದ್ದರೂ, ಮೈಸೂರಿನ ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳಿಂದ ನಾನು ಘಾಸಿಗೊಂಡಿದ್ದೇನೆ. ನನ್ನ ಸ್ವಂತ ಸಹೋದರ ಅರಸಿನ-ಕುಂಕುಮ ಭಾಗವಾಗಿ ಕೊಟ್ಟ ಜಮೀನಿನ ಬಾಬ್ತು ಪಡೆದು ನಿವೇಶನಗಳು ಇಷ್ಟೊಂದು ರಾದ್ದಾಂತವಾಗುತ್ತದೆ.

ಇದರಿಂದ ನನ್ನ ಪತಿಯವರು ಅನ್ಯಾಯವಾಗಿ ಆರೋಪಗಳನ್ನು ಎದುರಿಸುವಂತಾಗಬಹುದು ಎಂದು ನಾನು ಊಹಿಸಿದವಳಲ್ಲ. ನನಗೆ ಈ ನಿವೇಶನ, ಮನೆ, ಆಸ್ತಿ, ಸಂಪತ್ತು, ಯಾವುದೂ ಕೂಡಾ ನನ್ನ ಪತಿಯ ಗೌರವ, ಘನತೆ, ಮರ್ಯಾದೆ, ಅವರ ನೆಮ್ಮದಿಗಿಂತ ದೊಡ್ಡದಲ್ಲ. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅವರಿಂದ ಏನನ್ನೂ ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಬಯಸದೇ ಇದ್ದ ನನಗೆ ಈ ನಿವೇಶನಗಳು ತೃಣಕ್ಕೆ ಸಮಾನ. ಈ ಹಿನ್ನಲೆಯಲ್ಲಿ ವಿವಾದಕ್ಕೆ ಕಾರಣವಾಗಿರುವ 14 ನಿವೇಶನಗಳನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ.ಈ ಬಗ್ಗೆ ನನ್ನ ಪತಿಯವರ ಅಭಿಪ್ರಾಯ ಏನಿದೆ ಎನ್ನುವುದು ನನಗೆ ತಿಳಿದಿಲ್ಲ. ನನ್ನ ಮಗನ ಬಳಿಯಾಗಲಿ, ನನ್ನ ಕುಟುಂಬದ ಇತರ ಸದಸ್ಯರ ಬಳಿಯಾಗಲಿ ಇದರ ಬಗ್ಗೆ ನಾನು ಚರ್ಚಿಸಿಲ್ಲ. ಇದು ನಾನು ನನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಕೈಗೊಂಡಿರುವ ತೀರ್ಮಾನ.


Share to all

You May Also Like

More From Author