ಹಾಸನ:- ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಜರುಗಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ರೌಡಿಶೀಟರ್ ಮಧು ಎಂಬಾತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬಂಧನದ ವೇಳೆ ಮಾರಕಾಸ್ತ್ರದಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ ಹಿನ್ನೆಲೆ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಸೆ.14 ರಂದು ರೌಡಿಶೀಟರ್ ಮಧು ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ವಾಟರ್ಮ್ಯಾನ್ ಗಣೇಶ್ನನ್ನು ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ. ಇಂದು ಹಬ್ಬಕ್ಕೆಂದು ಅರೇಹಳ್ಳಿಗೆ ಆರೋಪಿ ಮಧು ಬರುವುದಾಗಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದರು. ಬಂಧನದ ವೇಳೆ ಡ್ರ್ಯಾಗನ್ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.
ಒಂದು ಸುತ್ತು ಗುಂಡು ಹಾರಿಸಿ ಮಧುವನ್ನು ಶರಣಾಗುವಂತೆ ಇನ್ಸ್ಪೆಕ್ಟರ್ ವಿನಯ್ ತಿಳಿಸಿದ್ದರು. ಆದರೆ ಇದೇ ವೇಳೆ ಅರೇಹಳ್ಳಿ ಪೊಲೀಸ್ ಠಾಣೆ ಕಾನ್ಸ್ಟೇಬಲ್ಗಳಾದ ಶಶಿ ಹಾಗೂ ಅಶೋಕ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಬೇಲೂರು ಇನ್ಸ್ಪೆಕ್ಟರ್ ವಿನಯ್ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ಬೇಲೂರು ಆಸ್ಪತ್ರೆಗೆ ದಾಖಲಿಸಲಾಗಿದೆ.