ಬೆಳಗಾವಿ:- ಮುಡಾ ಆರೋಪಿ, ಕಳಂಕಿತ ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಚಾಲನೆ ನೀಡಿದ್ದು ಸರಿಯಲ್ಲ ಎಂದು ಪಿ ರಾಜೀವ್ ವಾಗ್ದಾಳಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಸರಾ ಮೆರವಣಿಗೆಯಲ್ಲಿ ರಾಜ್ಯದ ಕಳಂಕಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದು ಸರಿಯಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಮೇಲೆ ಆರೋಪ ಬಂದಾಗ ಸ್ಪಷ್ಟವಾಗಿ ನಿರಾಕರಣೆ ಮಾಡಿದ್ದರು. ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದ ಮೇಲೆ ಕಾಂಗ್ರೆಸ್ನ ಎಲ್ಲಾ ಮುಖಂಡರು ಅವಹೇಳನಕಾರಿಯಾಗಿ ಮಾತನಾಡಿದ್ದರು. ನ್ಯಾಯಾಲಯಕ್ಕೆ ಮೇಲ್ನೋಟಕ್ಕೆ ಹಗರಣ ಆಗಿದೆ ಎಂದು ಗೊತ್ತಾದ ಮೇಲೆ ತನಿಖೆಗೆ ಅನುಮತಿ ನೀಡಿದೆ. ಸಿದ್ದರಾಮಯ್ಯನವರು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಳಂಕಿತ ಮುಖ್ಯಮಂತ್ರಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ವಿರುದ್ಧ 60ಕ್ಕೂ ಹೆಚ್ಚು ಲೋಕಾಯುಕ್ತದಲ್ಲಿ ಕೇಸ್ ದಾಖಲಾಗಿವೆ. ಕೇಸ್ ದಾಖಲಾಗಿದ್ದಕ್ಕೆ ಲೋಕಾಯುಕ್ತ ತನಿಖಾ ಸಂಸ್ಥೆ ಬಂದ್ ಮಾಡಿಸಿದ್ದರು. ರಾಜ್ಯ ಭ್ರಷ್ಟಾಚಾರದಲ್ಲಿ ಮುಳುಗಿ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಗೃಹಲಕ್ಷ್ಮಿ ಹಣ ಬರೋದು ತಪ್ಪಿದೆ. ಮತ್ತೆ ಲೂಟಿ ಮಾಡುವ ಕೆಲಸ ಶುರುವಾಗಿದೆ. ವಾಲ್ಮೀಕಿ ಹಗರಣದ ಹಣ ಚುನಾವಣೆಗೆ ಬಳಸಿಕೊಂಡಿದ್ದಾರೆಂದು ಇಡಿ ಸ್ಪಷ್ಟವಾಗಿ ಉಲ್ಲೇಖ ಮಾಡಿದೆ. ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ಹರಿಹಾಯ್ದರು.