ಬೆಳಗಾವಿ: ರಾಜ್ಯ ಸರಕಾರದ ಮಹತಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಿಂದ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಬರುತ್ತದೆ. ಆದರೆ ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ. ಈಗ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್. ಎರಡು ತಿಂಗಳ ಹಣ ಅಕ್ಟೋಬರ್‌ನಲ್ಲಿ ಜಮೆಯಾಗಲಿದೆ. ಮೂಡಲಗಿ ತಾಲೂಕಿನ ಕಲ್ಲೋಳ್ಳಿಯಲ್ಲಿ ಮಾತನಾಡಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಇದೇ ಅ.7 ಮತ್ತು 9 ರಂದು ಎರಡೂ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಲಿದೆ ಎಂದು ತಿಳಿಸಿದರು.
ತಾಂತ್ರಿಕ ಕಾರಣದಿಂದ ಎರಡು ತಿಂಗಳ ಕಂತಿನ ಹಣ ತಡವಾಗಿತ್ತು. ಈ ತಿಂಗಳು ಜುಲೈ ಮತ್ತು ಆಗಸ್ಟ್ ಕಂತಿನ ಹಣ ಜಮೆಯಾಗಲಿದೆ ಎಂದು ಹೇಳಿದರು.ಈ ಲಕ್ಷ್ಮೀ ಹೆಬ್ಬಾಳಕರ್ ಹಿಡಿದ ಕೆಲಸವನ್ನು ಮಾಡದೇ ಬಿಡುವುದಿಲ್ಲ ಎಂದು ಮೊನ್ನೆ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ನನ್ನ ಬಗ್ಗೆ ಹೇಳಿದ್ದಾರೆ.
ಈ ಹೆಣ್ ಮಗಳು ತುಂಬಾ ಕಿಲಾಡಿ, ಹಠ ಮಾಡಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದೇ ಲಕ್ಷ್ಮೀ ಹೆಬ್ಬಾಳಕರ್ ಅಂತ ಸಿಎಂ ಸಿದ್ದರಾಮಯ್ಯ ನನ್ನ ಬಗ್ಗೆ ಹೇಳಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪಟ್ಟು ಹಿಡಿದು ಯೋಜನೆ ಮಾಡಿಸಿದ್ದೇನೆ. ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.