ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತ: ನ್ಯೂಝಿಲೆಂಡ್ ವಿರುದ್ಧ ಹೀನಾಯ ಸೋಲು!

Share to all

ನ್ಯೂಝಿಲೆಂಡ್ ವಿರುದ್ಧ ಮಹಿಳಾ ಭಾರತ ತಂಡಕ್ಕೆ ಹೀನಾಯ ಸೋಲಾಗಿದೆ. ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು.

ಟಾಸ್ ಗೆದ್ದ ಕಿವೀಸ್ ನಾಯಕಿ ಸೋಫಿ ಡಿವೈನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡಕ್ಕೆ ಸುಝಿ ಬೇಟ್ಸ್ (27) ಹಾಗೂ ಪ್ಲಿಮ್ಮರ್ಸ್ (34) ಉತ್ತಮ ಆರಂಭ ಒದಗಿಸಿದ್ದರು. ಪವರ್ ಪ್ಲೇನಲ್ಲಿ 55 ರನ್ ಪೇರಿಸಿದ ಈ ಜೋಡಿಯು ಮೊದಲ ವಿಕೆಟ್‌ಗೆ 64 ರನ್ ಕಲೆಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಮೆಲಿಯಾ ಕೆರ್ ಕೇವಲ 13 ರನ್ ಬಾರಿಸಿ ಔಟಾದರು.

ಈ ಹಂತದಲ್ಲಿ ಕಣಕ್ಕಿಳಿದ ನಾಯಕಿ ಸೋಫಿ ಡಿವೈನ್ ಬಿರುಸಿನ ಬ್ಯಾಟಿಂಗ್​ನೊಂದಿಗೆ ಭಾರತೀಯ ಬೌಲರ್‌ಗಳನ್ನು ದಂಡಿಸಿದರು. ಅಲ್ಲದೆ ಕೇವಲ 36 ಎಸೆತಗಳಲ್ಲಿ 7 ಫೋರ್ ಗಳೊಂದಿಗೆ ಅಜೇಯ 57 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 160 ರನ್ ಕಲೆಹಾಕಿತು.

ಸ್ಪರ್ಧಾತ್ಮಕ ಗುರಿ ಪಡೆದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. ಶಫಾಲಿ ವರ್ಮಾ 2 ರನ್ ಗಳಿಸಿ ಔಟಾದರೆ, ಸ್ಮೃತಿ ಮಂಧಾನ 12 ರನ್ ಗಳಿಸಲಷ್ಟೇ ಶಕ್ತರಾದರು. ಇನ್ನು ನಾಯಕಿ ಹರ್ಮನ್ ಪ್ರೀತ್ ಕೌರ್ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ಜೆಮಿಮಾ ರೊಡ್ರಿಗಸ್ (13) ಹಾಗೂ ರಿಚಾ ಘೋಷ್ (12) ಕ್ರೀಸ್ ಕಚ್ಚಿ ನಿಲ್ಲುವಲ್ಲಿ ವಿಫಲರಾದರು. ಪರಿಣಾಮ 70 ರನ್ ಗಳಿಸುವಷ್ಟರಲ್ಲಿ ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡಿತು.

ಇದಾದ ಬಳಿಕ ದೀಪ್ತಿ ಶರ್ಮಾ 13 ರನ್ ಗಳಿಸಿದರೆ, ಅರುಂಧತಿ ರೆಡ್ಡಿ (1), ಪೂಜಾ ವಸ್ತ್ರಾಕರ್ (8) ಬಂದ ವೇಗದಲ್ಲೇ ಹಿಂತಿರುಗಿದರು. ಇನ್ನು ಶ್ರೇಯಾಂಕ ಪಾಟೀಲ್ ಇನಿಂಗ್ಸ್ ಕೇವಲ 7 ರನ್ ಗಳಿಗೆ ಸೀಮಿತವಾಯಿತು.

ಅಂತಿಮವಾಗಿ ಭಾರತ ತಂಡವು 19 ಓವರ್‌ಗಳಲ್ಲಿ 102 ರನ್ ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ನ್ಯೂಝಿಲೆಂಡ್ ತಂಡವು 58 ರನ್​ಗಳ ಭರ್ಜರಿ ಜಯ ಸಾಧಿಸಿ ಟಿ20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ.


Share to all

You May Also Like

More From Author