ಸಾಮಾನ್ಯವಾಗಿ ಅಡುಗೆ ಮಾಡಲು ಎಲ್ಲರೂ ಈರುಳ್ಳಿಯನ್ನು ಖಂಡಿತವಾಗಿಯೂ ಬಳಸುತ್ತಾರೆ. ಆದರೆ ಈರುಳ್ಳಿ ಸಿಪ್ಪೆ ಸುಲಿದ ನಂತರ, ಅನೇಕ ಮಂದಿ ಅದನ್ನು ನಿಷ್ಪ್ರಯೋಜಕವೆಂದು ಪರಿಗಣಿಸಿ ಎಸೆಯುತ್ತಾರೆ. ಆದರೆ ತೋಟಗಾರಿಕೆಯಿಂದ ಹಿಡಿದು ಕೂದಲ ರಕ್ಷಣೆಯವರೆಗೂ ಈರುಳ್ಳಿ ಸಿಪ್ಪೆಯು ಸಾಕಷ್ಟು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಈರುಳ್ಳಿಯನ್ನು ಇಷ್ಟ ಪಟ್ಟು ತಿನ್ನುವ ಜನರು ಅದರ ಸಿಪ್ಪೆಯನ್ನು ಬಳಸುವ ಬದಲು, ಕಸದ ಬುಟ್ಟಿಗೆ ಎಸೆಯುತ್ತಾರೆ. ನಿಮಗೆ ಗೊತ್ತಾ ಈರುಳ್ಳಿಯಂತೆ, ಇದರ ಸಿಪ್ಪೆ ಕೂಡ ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ ಇದರ ಸಹಾಯದಿಂದ ನೀವು ಅನೇಕ ರೀತಿಯ ಲಾಭಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಈ ಸಿಪ್ಪೆಗಳಿಂದ ಯಾವ ರೀತಿಯ ಉಪಯೋಗವಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ಸಿಪ್ಪೆಗಳಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಸಿ ಜೊತೆಗೆ, ಉತ್ಕರ್ಷಣ ನಿರೋಧಕಗಳು ಸಹ ಕಂಡು ಬರುತ್ತವೆ. ಆದ್ದರಿಂದ ಈರುಳ್ಳಿ ಸಿಪ್ಪೆಯನ್ನು ಎಸೆಯುವ ಬದಲು ಅದನ್ನು ಸರಿಯಾಗಿ ಬಳಸಿಕೊಳ್ಳಿ.
ಈರುಳ್ಳಿ ಸಿಪ್ಪೆ ಕೂದಲು ಉದುರುವುದನ್ನು ತಡೆಯುತ್ತದೆ;
ಮೊದಲು ಈ ಸಿಪ್ಪೆಯನ್ನು ತೊಳೆದು ನೀರಿನಲ್ಲಿ ಕುದಿಸಿ, ತಣ್ಣಗಾಗಿಸಿ ಆ ಬಳಿಕ ಕುದಿಸಿಟ್ಟ ನೀರನ್ನು ತೆಲೆಗೆ ಹಚ್ಚಿ ನೆತ್ತಿಯ ಮೇಲೆ ಸ್ವಲ್ಪ ಸಮಯದ ವರೆಗೆ ಮಸಾಜ್ ಮಾಡಿ ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. ಇದು ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ. ಇಲ್ಲವಾದಲ್ಲಿ ನೀವು ಕುದಿಸಿಟ್ಟ ಈರುಳ್ಳಿ ಸಿಪ್ಪೆಯ ನೀರಿಗೆ ಅಲೋವೆರಾವನ್ನು ಬೆರೆಸಿ ತಲೆಗೆ ಹಚ್ಚಿ. ಈ ರೀತಿ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ಪೂರ್ತಿಯಾಗಿ ನಿವಾರಣೆಯಾಗುತ್ತದೆ. ಇದರ ಹೊರತಾಗಿ, ಇದು ಕೂದಲು ಉದುರುವಿಕೆಯನ್ನು ಸಹ ಕಡಿಮೆ ಮಾಡುತ್ತದೆ. ನೀವು ಈರುಳ್ಳಿ ಸಿಪ್ಪೆಯನ್ನು ಮಿಕ್ಸಿಯಲ್ಲಿ ರುಬ್ಬಿ ನುಣ್ಣಗೆ ಪುಡಿ ಮಾಡಿ ಅದಕ್ಕೆ ಅಲೋವೆರಾ ಬೆರೆಸಿಯೂ ಹಚ್ಚಿಕೊಳ್ಳಬಹುದು. ಇದು ಕೂಡ ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ಚರ್ಮಕ್ಕಾಗಿ ಈರುಳ್ಳಿ ಸಿಪ್ಪೆ;
ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ ಎ, ಸಿ ಮತ್ತು ಇ ಇದೆ, ಆದ್ದರಿಂದ ಇದು ನಿಮ್ಮ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಈರುಳ್ಳಿ ಸಿಪ್ಪೆಯ ಜೊತೆಗೆ ಕಡಲೆ ಹಿಟ್ಟು ಮತ್ತು ಚಿಟಿಕೆ ಅರಿಶಿನವನ್ನು ಬೆರೆಸಿ ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 15 ರಿಂದ 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಮಾಡುವುದರಿಂದ ಮುಖದ ಮೇಲಿನ ಕಲೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ.
ಸೊಳ್ಳೆಗಳನ್ನು ನಿವಾರಣೆ ಮಾಡಲು ಉಪಯುಕ್ತ;
ಈರುಳ್ಳಿ ಸಿಪ್ಪೆಯ ವಾಸನೆಯಿಂದ ನೀವು ನೊಣಗಳು ಮತ್ತು ಸೊಳ್ಳೆಗಳನ್ನು ಓಡಿಸಬಹುದು. ಇದಕ್ಕಾಗಿ, ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ನೆನೆಸಿ ಬಳಿಕ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಇಟ್ಟುಕೊಳ್ಳಿ. ಈ ನೀರನ್ನು ನೊಣ ಮತ್ತು ಹೆಚ್ಚು ಸೊಳ್ಳೆಗಳು ಇರುವ ಕಡೆ ಸಿಂಪಡಿಸುವ ಮೂಲಕ ಕೀಟಾಣುಗಳಿಂದ ದೂರವಿರಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.