ಒಂದಲ್ಲಾ..ಎರಡಲ್ಲಾ..ಮೂರು ಸಾವಿರ ಎಕರೆ ಭೂಮಿಯನ್ನ ಮಠಕ್ಕೆ ದಾನ ಮಾಡಿದ ಉದ್ಯಮಿ..
ರಾಮನಗರ:- ರಾಜಸ್ಥಾನ ಮೂಲದ ಗಣಿ ಉದ್ಯಮಿಯೊಬ್ಬರು ತಮ್ಮ ಹೆಸರಿನಲ್ಲಿದ್ದ ಮೂರು ಸಾವಿರ ಎಕರೆ ಭೂಮಿಯನ್ನ ಮಾಗಡಿ ತಾಲೂಕಿನ ಪಾಲನಹಳ್ಳಿ ಮಠಕ್ಕೆ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಗಣಿ ಉದ್ಯಮಿ ಓಸ್ವಾಲ್ ಜೈನ್ ರಾಜಸ್ಥಾನ ಮಾತ್ರವಲ್ಲದೆ ಮುಂಬೈ,ಗುಜರಾತ್, ಕರ್ನಾಟಕ, ತಮಿಳನಾಡು,ಹಾಗೂ ಆಂದ್ರಪ್ರದೇಶದಲ್ಲಿ ಭೂಮಿ ಹೊಂದಿದ್ದರು.ಕಲ್ಲಿದ್ದಲು, ಗಣಿ,ಚಿನ್ನ ಹಾಗೂ ಅದಿರಿನ ಗಣಿಗಾರಿಕೆ ಮಾಡುತ್ತಿದ್ದರು.ಈಗ ಜೀವನದಲ್ಲಿ ಮೋಕ್ಷ ಸಾಧನೆಗಾಗಿ 78 ವರ್ಷದ ಓಸ್ವಾಲ್ ಜೈನ್ ಇಷ್ಟು ದೊಡ್ಡ ಪ್ರಮಾಣದ ಜಮೀನನ್ನು ದಾನಮಾಡಿ ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ.
ಓಸ್ವಾಲ್ ಜೈನ್ ಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ರಾಜಸ್ಥಾನದಲ್ಲಿ ಸಿಎ ವೃತ್ತಿಯಲ್ಲಿದ್ದರೆ ಒಬ್ಬ ಮಗ ವಿದೇಶದಲ್ಲಿದ್ದಾನೆ.ಇಬ್ಬರಿಗೂ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯನ್ನು ನೀಡಿರುವ ಓಸ್ವಾಲ್ ಜೈನ್ ತಾವು ಬದುಕಿನಲ್ಲಿ ಗಳಿಸಿರುವ ಸ್ವಯಾರ್ಜಿತ ಆಸ್ತಿಯಾಗಿರುವ 3 ಸಾವಿರ ಎಕರೆಯನ್ನು ಮಾತ್ರ ದಾನ ಮಾಡಿದ್ದಾರೆ. ಪಾಲನಹಳ್ಳಿ ಮಠದ ಫೀಠಾದ್ಯಕ್ಷರಾದ ಡಾ:ಸಿದ್ದರಾಜ ಸ್ವಾಮೀಜಿಗೆ ಕಾನೂನು ಪ್ರಕಾರ ಆಸ್ತಿ ಹಸ್ತಾಂತರ ಮಾಡಿದ್ದಾರೆ.
ಕಳೆದ 27 ವರ್ಷಗಳಿಂದ ಪಾಲನಹಳ್ಳಿ ಮಠದ ಜೊತೆಗೆ ಓಸ್ವಾಲ್ ಒಡನಾಟ ಹೊಂದಿದ್ದರು.ಜೈನ್ ವ್ರತಾಚರಣೆ ಮಾಡಿ ಅಹಿಂಸಾ ಪರಮೋಧರ್ಮ ಮತ್ತು ಮೋಕ್ಷ ಸಾಧನೆಗಾಗಿ ಮಠಕ್ಕೆ ಆಸ್ತಿಯನ್ನು ದಾನ ಮಾಡಿದ್ದೇನೆ ಎಂದು ಓಸ್ವಾಲ್ ತಿಳಿಸಿದ್ದಾರೆ.ಗಣಿ ಉದ್ಯಮಿ ನಡೆಗೆ ಮಠದ ಭಕ್ತರಿಂದ ಶ್ಲಾಘನೆ ವ್ಯಕ್ತವಾಗಿದೆ.