ಬೆಂಗಳೂರು :ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ಆರೋಪಿ 1 (A1) ಮತ್ತು ಅವರ ಆಪ್ತ ಸಹಾಯಕ ಅರ್ಜುನ್ ಅನ್ನು ಆರೋಪಿ 2 (A2) ಎಂದು ಹೆಸರಿಸಿ ಎಫ್ಐಆರ್ ದಾಖಲಿಸಿದ್ದಾರೆ.
ದೂರು ನೀಡಿದ ಮಹಿಳೆ, ಶಾಸಕ ವಿನಯ್ ಕುಲಕರ್ಣಿ ಅವರು 2022 ರಿಂದ ನನಗೆ ಪರಿಚಯ. ಆಗಾಗ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದರು. ವಿಡಿಯೋ ಕಾಲ್ನಲ್ಲಿ ಬೆತ್ತಲಾಗಲು ಹೇಳುತ್ತಿದ್ದರು. ಅದೇ ರೀತಿ ಅವರು ಮನೆಗೆ ಕರೆಸಿಕೊಂಡಿದ್ದರು. 2022ರ ಆಗಸ್ಟ್ 24 ರಂದು ಸಂಜೆ 4 ಗಂಟೆಗೆ ಆಟೋದಲ್ಲಿ ಅವರ ಮನೆಗೆ ಹೋಗಿದ್ದೆ. ಈ ವೇಳೆ ಅತ್ಯಾಚಾರ ನಡೆದಿದೆ ಎಂದು ದೂರಿದ್ದಾರೆ.
ತಮ್ಮ ಮನೆಯಿಂದ ಕಾರಿನಲ್ಲಿ ಹೊರಗೆ ಬಂದ ಬಂದ ವಿನಯ್ ಕುಲಕರ್ಣಿ ಒಳಗೆ ಕುಳಿತುಕೊಳ್ಳುವಂತೆ ಹೇಳಿದ್ದರು. ಬಳಿಕ ದೇವನಹಳ್ಳಿ ಸಮೀಪದ ಐವಿಸಿ ರೋಡ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಸಂಜೆಯಾದ ಬಳಿಕ ಹಿಂದಿನ ಸೀಟ್ನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದೂ ತಮ್ಮ ಮೇಲೆ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ವಿನಯ್ ಕುಲಕರ್ಣಿ ವಿರುದ್ಧ ಅತ್ಯಾಚಾರ, ಕಿರುಕಿಳ, ಜೀವ ಬೆದರಿಕೆ, , ವಂಚನೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.
ಇನ್ನೂ ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪವನ್ನು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ತಳ್ಳಿಹಾಕಿದ್ದು, ಇದು ನನ್ನ ವಿರುದ್ಧದ ಷಡ್ಯಂತ್ರ ಎಂದು ಹೇಳಿದ್ದಾರೆ. “ನಾನು ಆ ಮಹಿಳೆಯನ್ನು ಟಚ್ ಮಾಡಿದ್ರೆ ನನ್ನ ತಾಯಿಯನ್ನು ಟಚ್ ಮಾಡಿದ ಹಾಗೆಯೇ. ಕೇವಲ ಎರಡು ಮೂರು ಸಲ ನಡೆದ ವಿಡಿಯೋ ಕಾಲ್ ಸಂಭಾಷಣೆ ಇಟ್ಟುಕೊಂಡು ಹೀಗೆ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಬದುಕಿದ್ದೇನೆ. ಕೆಲವು ಮಂದಿ ಹಿಂದಿನಿಂದ ಈ ರೀತಿ ಕೆಲಸ ಮಾಡಿಸ್ತಿದ್ದಾರೆ. ನನ್ನ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸಾಕ್ಷಿಗಳ ಮೇಲೆ ಪರಿಣಾಮ ಬೀರಲು ಈ ರೀತಿಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂದರು.