ಬೆಂಗಳೂರು: ಮುಡಾ ಹಗರಣ ರಾಷ್ಟ್ರವ್ಯಾಪಿ ಸದ್ದು ಮಾಡಿದೆ. ಮುಡಾ ಹಗರಣದ ವಿಚಾರವಾಗಿ ರಾಜಕೀಯ ಜಟಾಪಟಿ ಜೋರಾಗಿದೆ. ಮುಖ್ಯಮಂತ್ರಿಗಳ ರಾಜೀನಾಮೆಗಾಗಿ ಬಿಜೆಪಿ ಆಗ್ರಹಿಸುತ್ತಿದೆ. ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಎ1 ಆಗಿದ್ದಾರೆ. ಹೌದು ಮೈಸೂರು ಮುಡಾ ಹಗರಣ ವಿರುದ್ಧದ ತನಿಖೆಗೆ ಅನುಮತಿ ನೀಡಿದ್ದ ಪ್ರಾಸಿಕ್ಯೂಷನ್ ಅರ್ಜಿ ವಜಾ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡುವ ಮೂಲಕ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು.
ಇದೀಗ ಸಿಎಂ ಸಿದ್ದರಾಮಯ್ಯರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರನ್ನು ಇಂದು ಭೇಟಿ ಮಾಡಿದ್ದಾರೆ. ಬೆಂಗಳೂರಿಗೆ ಮಾಲ್ಡೀವ್ಸ್ ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ರಾಜಭವನದಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಹೀಗಾಗಿ ರಾಜ್ಯಪಾಲರ ಆಹ್ವಾನ ಮೇರೆಗೆ ರಾಜಭವನಕ್ಕೆ ತೆರಳಿದ್ದ ಸಿದ್ದರಾಮಯ್ಯ ಈ ವೇಳೆ ಭೇಟಿ ಮಾಡಿ ನಗುಮುಖದಿಂದಲೇ ಕೈಕುಲುಕಿ ಕುಶಲೋಪರಿ ವಿಚಾರಿಸಿದ್ದಾರೆ.
ಕೆಲವೊಂದು ಮೂಲಗಳ ಪ್ರಕಾರ, ಮುಡಾ ಪ್ರಕರಣದಲ್ಲಿ ತನಿಖೆಯಾಗಲಿ ಎನ್ನುವುದೇ ಸಿಎಂ ಬಯಕೆ, ತನಿಖೆಗೆ ತಡೆ ತಂದರೆ ಮತ್ತೆ ಟೀಕೆಯನ್ನು ಎದುರಿಸಬೇಕಾಗುತ್ತದೆ ಎನ್ನುವುದು ಸಿದ್ದರಾಮಯ್ಯನವರ ನಿಲುವು ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಇಡಿ ರಂಗ ಪ್ರವೇಶದ ನಂತರ ಕಾರ್ಯತಂತ್ರವನ್ನು ಬದಲಾಯಿಸುವ ಚಿಂತನೆ ನಡೆದಿದೆ.