ಬೆಂಗಳೂರು: ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ಇಂದೂ ಕೂಡ ನ್ಯಾಯಾಲಯ ಜಾಮೀನು ಮಂಜೂರು ಮಾಡಿಲ್ಲ. ಈ ಮೂಲಕ ನಟ ಹಾಗೂ ಅವರ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ, ಪವಿತ್ರಾ ಗೌಡ ಸೇರಿ 11 ಮಂದಿಯ ಜಾಮೀನು ಅರ್ಜಿಗಳ ವಿಚಾರಣೆಯನ್ನು ಬೆಂಗಳೂರಿನ ಸತ್ರ ನ್ಯಾಯಾಲಯ ಮುಂದೂಡಿದೆ.
ದರ್ಶನ್ರ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ಪವಿತ್ರಾ ಗೌಡ ಅರ್ಜಿಯ ಸೇರಿದಂತೆ ಇತರೆ ಐದು ಆರೋಪಿಗಳ ಜಾಮೀನು ಅರ್ಜಿಯ ಆದೇಶವನ್ನು ಅಕ್ಟೋಬರ್ 14 ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.
ಎಸ್ಪಿಪಿ ಪ್ರಸನ್ನ ಕುಮಾರ್ ವಾದಕ್ಕೆ ಪ್ರತಿವಾದ ಸಲ್ಲಿಸಲು ಸಿವಿ ನಾಗೇಶ್ ಅವರಿಗೆ ಅವಕಾಶ ನೀಡಲಾಯ್ತು. ಆದರೆ ತಾವು ನಾಳೆ (ಅಕ್ಟೋಬರ್ 10) ರಂದು ವಾದ ಮಂಡಿಸುವುದಾಗಿ ಹೇಳಿದರು ಹಾಗಾಗಿ, ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಯ್ತು. ಇನ್ನು ಎ1 ಪವಿತ್ರಾ, ಎ8, ಎ11, ಎ12 ಹಾಗೂ ಎ13 ಅವರುಗಳ ಜಾಮೀನು ಅರ್ಜಿಯ ಕುರಿತಾದ ಆದೇಶವನ್ನು ಅಕ್ಟೋಬರ್ 14 ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದರು.